ಸಿಎಂ ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ ಅನುಮಾನ

Published on

ಬಳ್ಳಾರಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಈವರೆಗೆ ಹದಿನಾರು ಬಜೆಟ್ ಮಂಡಿಸಿದ್ದು, 17ನೇ ಬಜೆಟ್ ಮಂಡಿಸುವುದು ಅನುಮಾನವಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಹಿಂದುಳಿದ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ 420ಕೋಟಿ ರೂ. ಅನುದಾನ ವ್ಯಯಿಸಲು ಮುಂದಾಗಿದೆ. ಇದರಲ್ಲೂ ಹಣ ಕಬಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಮರು ಸಮೀಕ್ಷೆಯ ಜವಾಬ್ದಾರಿಯನ್ನು ಸಿಎಂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಧುಸೂದನ್ ನಾಯಕ ಎಂಬುವವರಿಗೆ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಲ್ಲದೆ, ಆರ್ಥಿಕ ಸಮೀಕ್ಷೆ ಕೈಗೊಂಡು ಆರ್ಥಿಕವಾಗಿ ಸಬಲರಾಗಿರುವ ಕುಟುಂಬಗಳ ಬಿಪಿಎಲ್‌ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಜಾತಿ ಸಮೀಕ್ಷೆಯಲ್ಲಿ ಸಮುದಾಯಗಳ ಮುಂದೆ ಕ್ರಿಶ್ಚಿಯನ ಎಂಬ ಪದವನ್ನು ಸೇರಿಸಿ ಮುಂದಿನ ದಿನಗಳಲ್ಲಿ ದಾಖಲೆಗಳ ತಾಂತ್ರಿಕ ಸಮಸ್ಯೆಗೆ ಸಿಲುಕಿಸುವುದರ ಜತೆಗೆ ಜಾತಿಗಳ ನಡುವೆ ದ್ವೇಷ ಬೆಳೆಯಲು ದಾರಿಮಾಡಿ ಕೊಟ್ಟಂತಾಗಲಿದೆ ಎಂದು ಹೇಳಿದರು.

ಹೈಕಮಾಂಡ್ ಮನವೊಲಿಕೆಗಾಗಿ ಮರು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಹೈಕಮಾಂಡ್ ಪಾಲಿಗೆ ಕರ್ನಾಟಕ ರಾಜ್ಯ ಎಟಿಎಂ ಆಗಿದೆ ಪರಿವರ್ತನೆಯಾಗಿದೆ ಎಂದು ದೂರಿದರು.

ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ ಬಳ್ಳಾರಿ ಮೂಲದ ಪ್ರವೀಣ್ ಕುಮಾರ ಸಹ ಒಬ್ಬರಾಗಿದ್ದಾರೆ. ಮೃತ ಪಟ್ಟವರಲ್ಲಿ ಬಹುತೇಕರು ಯುವಕರಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ತಲಾ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net