ಬಳ್ಳಾರಿ ; ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಕೈಗೊಂಬೆಯಾಗಿದ್ದು, ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೋಮ ಸ್ಥಿತಿಯಲ್ಲಿದ್ದು, ಸಿಎಂ ಸಿದ್ದರಾಮಯ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವ್ಯಂಗವಾಡಿದರು.
ಇದೇ ಜು 30 ರಂದು ಸಿಎಂ, ಡಿಸಿಎಂ ಸೇರಿದಂತೆ ಇತರೆ ನಾಯಕರನ್ನು ದೆಹಲಿಗೆ ಆಹ್ವಾನಿಸಿದ್ದಾರೆ. ಆದ್ದರಿಂದ, ದೆಹಲಿಗೆ ತೆರಳುವ ಮುನ್ನವೇ ಸಿಎಂ ಸಿದ್ದರಾಮಯ್ಯ ಅಪ್ತರ ಮೂಲಕ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಗುಡುಗಿದರು.
ಬೆಂಗಳೂರಿನಲ್ಲಿ ನಡೆದ ಕೇಂದ್ರ ಎಐಸಿಸಿ ಒಬಿಸಿ ಸಭೆ ಕೇವಲ ಬೂಟಾಟಿಕೆ ಮಾತ್ರ. ಬಿಹಾರದಲ್ಲಿ ಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರನ್ನು ಒಬಿಸಿ ನಾಯಕನೆಂದು ಬಿಂಬಿಸಲು ಹೊರಟಿದೆ. ಚುನಾವಣೆ ಮುಗಿದ ಬಳಿಕ ಸಭೆ, ಒಬಿಸಿ ನಾಯಕರು ಹಾಗೂ ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಕೂಡ ಇರಲ್ಲ. ಒಟ್ಟಾರೆ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಆರೆಕೆ ಕುರಿ ಮಾಡಲು ಹೊರಟಿದೆ ಎಂದರು.
ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಇಬ್ಬರ ನಡುವೆ ಯಾರು ಸಿಎಂ ಎಂಬುದು ರಾಜ್ಯದ ಜನರಿಗೆ ಸ್ಪಷ್ಟಪಡಿಸಲಿ. ಸುರ್ಜೆವಾಲ್ ಕಳೆದ ಎರಡ್ಮೂರು ದಿನದಿಂದ ಶಾಸಕರ ಜತೆ ಸಭೆ ನಡೆಸಿ ಅವರ ಹೆಲ್ತ್ ಕಾರ್ಡ್ ಹಾಗೂ ಮನಸ್ಥಿತಿ ಬಗ್ಗೆ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅಪ್ತ ಲಿಂಗರಾಜು ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಣಿಕೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಜ್ಯ ಉಸ್ತುವಾರಿ ಸುರ್ಜೆವಾಲ್ ಅವರು ಜಮೀರ್ ಅಹಮದ್ ಖಾನ್‌ಗೆ ಬೆಸ್ಟ್ ಮಿನಿಸ್ಟರ್ ಎಂಬುದಾಗಿ ಬೆನ್ನು ತಟ್ಟಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜಿಲ್ಲೆಗೆ ಭೇಟಿ ನೀಡಿದರೆ ಅವರ ಪ್ರೋಗ್ರಾಸ್ ರಿಪೋರ್ಟ್ ಜನರು ನೀಡಲಿದ್ದಾರೆ ಎಂದರು.
ರೆಡ್ಡಿ ಜತೆ ವೈಮನಸ್ಸಿಲ್ಲ : ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ನನ್ನ ನಡುವಿನ ವೈಮನಸ್ಸು ಅರ್ಧಲೋಟ ಬಿಸಿನೀರು ಕುಡಿವಯೊಳಗೆೆ ಮುಗಿಯಲಿದೆ. ಕೆಲ ದಿನಗಳ ಹಿಂದೆ ಕೆಲವೊಂದು ವಿಚಾರಗಳಲ್ಲಿ ಇಬ್ಬರ ನಡುವೆ ಭಿನ್ನಮತದಿಂದ ಪರಸ್ಪರ ಟೀಕಿಸಿಕೊಂಡಿದ್ದು ಬಿಟ್ಟರೆ ಕಚ್ಚಾಟ ನಡೆಸಿಲ್ಲ. ಇಬ್ಬರು ಒಂದೇ ಪಕ್ಷದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯ ವೇದಿಕೆಯಲ್ಲಿ ಸೇರಲಿದ್ದು ಯಾವುದೇ ಅನುಮಾನವಿಲ್ಲ. ರಾಮುಲು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಯಿಲ್ಲ. ನನ್ನದೇ ಆದ ಶೇ. 5ರಷ್ಟು ಮತಗಳಿವೆ ಎಂದರು.
ಶಾಸಕ ಜಿ.ಜನಾರ್ದನರೆಡ್ಡಿ ಪುತ್ರ ಕಿರೀಟಿ ಅಭಿನಯದ ಜೂನಿಯರ್ ಸಿನಿಮಾವು ರಾಜ್ಯಾದ್ಯಂತ ಜು 18 ರಂದು ತೆರೆಕಾಣಲಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಸಿನಿಮಾ ವೀಕ್ಷಿಸಿ ಶುಭ ಹಾರೈಸುವೆ ಎಂದರು.