ಜೀನ್ಸ್ ರಾಜಧಾನಿಯಾಗುವುದೇ ಬಳ್ಳಾರಿ?, ರಾಜ್ಯ ಬಜೆಟ್ ಮೇಲೆ ಹೆಚ್ಚಿದ ನಿರೀಕ್ಷೆ

RAHUL GANDHI
ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಗೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಮತ್ತು ಸಚಿವ ಬಿ.ನಾಗೇಂದ್ರ ಅವರ ಭೇಟಿ ನೀಡಿದ ಸಂದರ್ಭ.
Published on

ಹೀರಾನಾಯ್ಕ ಟಿ. ಬಳ್ಳಾರಿ
ಗಣಿನಾಡು ಬಳ್ಳಾರಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ವಿಶೇಷ ಉಡುಗೊರೆ ನೀಡುವ ನಿರೀಕ್ಷೆ ಹೆಚ್ಚಿದ್ದು, ಇದಕ್ಕಾಗಿ ಜನರು ಕಾದು ಕುಳಿತಿದ್ದಾರೆ.

ಈಗಾಗಲೇ ಗ್ಯಾರಂಟಿ ಸ್ಕೀಂಗಳನ್ನು ಘೋಷಣೆ ಮಾಡಿದ್ದು, ಅವುಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಇನ್ನು ಜಿಲ್ಲೆಗೂ ಹೆಚ್ಚಿನ ಅನುದಾನ ನೀಡುತ್ತಾರಾ ಇಲ್ಲವೆ ಜನರ ನಿರೀಕ್ಷೆ ಹುಸಿಕೊಳಿಸುತ್ತಾರಾ ಎನ್ನುವುದು ಕುತೂಹಲ ಕೆರಳಿಸಿದೆ.

ಈಗಾಗಲೇ ಚುನಾವಣೆ ಪ್ರಚಾರ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಆಶ್ವಾಸನೆ ನೀಡಿದ್ದರು. ಜೀನ್ಸ್ ಉದ್ಯಮಕ್ಕೆ ಆಧುನಿಕ ಸ್ಪರ್ಶ ನೀಡುವ ಜತೆಗೆ ಜೀನ್ಸ್ ಪಾರ್ಕ್ ನಿರ್ಮಾಣ ಮಾಡುವರೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹಂಚಲು ಬಂದಿದ್ದೇನೆ’ ಎನ್ನುವ ಮೂಲಕ ಬಳ್ಳಾರಿ ಜನರ ಮನಸನ್ನು ಗೆದ್ದ ರಾಹುಲ್‌ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಬಜೆಟ್‌ನಲ್ಲೇ ಜೀನ್ಸ್ ಉದ್ಯಮ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿಡಲಾಗುವುದಾಗಿ ಭರವಸೆ ನೀಡಿದ್ದರು.

ಅಲ್ಲದೆ ಬಳ್ಳಾರಿಯ ಜೀನ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರಾೃಂಡ್ ಆಗಿ ರೂಪುಗೊಳ್ಳಲು ಜೀನ್ಸ್‌ನ ರಾಜಧಾನಿಯನ್ನಾಗಿ ಮಾಡಲಾಗುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಕೈ ಹಿಡಿದಿದ್ದು, ಈ ಬಾರಿ ಮೊದಲ ಬಜೆಟ್‌ನಲ್ಲೇ ಜೀನ್ಸ್ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರೆಯೇ? ಎನ್ನುವುದನ್ನು ಗಮನಿಸಬೇಕಿದೆ.

ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು.
ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು.

ಪಿಪಿಪಿ ಮಾದರಿಗೆ ಬೀಳುತ್ತಾ ಬ್ರೇಕ್?

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಹಾಗೂ ವಿಮಾನ ನಿಲ್ದಾಣ ಆಗಬೇಕೆನ್ನುವುದು ಬಹುವರ್ಷಗಳ ಬೇಡಿಕೆ ಇದೆ. ಆದರೆ ರಾಜ್ಯ ಸರ್ಕಾರ ಮಾತ್ರ ನೆಪಮಾತ್ರಕ್ಕೆ ಬಜೆಟ್‌ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿ, ಹುಸಿಗೊಳಿಸಿದ್ದುಂಟು. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣಕ್ಕೆ ಕಳೆದ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಖಾಸಗಿಯತ್ತ ಬೊಟ್ಟು ತೋರಿಸುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು.

ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಬ್ರೇಕ್ ಹಾಕಿ, ಬೇರೆ ಮಾರ್ಗೋಪಾಯ ಕಂಡುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಬಳ್ಳಾರಿ ಸಮೀಪ ಆಲದಹಳ್ಳಿಯಲ್ಲಿ 120 ಕೋಟಿ ರೂ. ವೆಚ್ಚದಲ್ಲಿ 23.25 ಎಕರೆ ಜಮೀನಿನಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಒಣ ಮೆಣಸಿನಕಾಯಿ ಮಾರುಕಟ್ಟೆ ಕಟ್ಟಲು ಉದ್ದೇಶಿಸಲಾಗಿದೆ. ಎರಡು ಸಲ ಟೆಂಡರ್ ಆಹ್ವಾನಿಸಿದರೂ ಖಾಸಗಿಯವರು ಯಾರೂ ಮುಂದೆ ಬಂದಿಲ್ಲ. ಖಾಸಗಿಯವರು ಉತ್ಸಾಹ ತೋರದ ಹಿನ್ನೆಲೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ನೆನಗುದಿಗೆ ಬಿದ್ದಿದೆ.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾತ್ಸಾರವೇಕೆ?

ಬಳ್ಳಾರಿ ಸಮೀಪದ ಚಾಗನೂರು ಬಳಿ ವಿಮಾನ ನಿಲ್ದಾಣ ನಿರ್ಮಿಸಬೇಕೆನ್ನುವ ಕನಸು ಇನ್ನೂ ನನಸಾಗಿಲ್ಲ. ರಾಜ್ಯದ ಶಿವಮೊಗ್ಗ, ವಿಜಯಪುರ ಇತರೆಡೆ ರಾಜ್ಯ ಸರ್ಕಾರದಿಂದಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಬಳ್ಳಾರಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೆತ್ತಿಕೊಳ್ಳುವುದಾಗಿ ರಾಜ್ಯ ಸರ್ಕಾರ 2022-23ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿತ್ತು.

ಆದರೆ ಅದು ಕೈಗೂಡಿಲ್ಲ. 987 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010 ಆ.6ರಂದು ಚೆನ್ನೈ ಮೂಲದ ಮಾರ್ಗ್ ಸಂಸ್ಥೆಗೆ ಸರ್ಕಾರ ಒಪ್ಪಿಸಿತ್ತು. 14 ವರ್ಷ ಕಳೆದರೂ ಯೋಜನೆ ಪ್ರಗತಿ ಕಾಣದಿದ್ದರಿಂದ ಒಪ್ಪಂದ ರದ್ದಾಗಿತ್ತು. ಉದ್ದೇಶಿತ ವಿಮಾನ ನಿಲ್ದಾಣ ಯೋಜನಾ ಸ್ಥಳದಲ್ಲಿ ಕಾಂಪೌಂಡ್ ಹಾಕಿರುವುದನ್ನು ಬಿಟ್ಟರೆ ಮತ್ತೇನೂ ಪ್ರಗತಿ ಆಗಿಲ್ಲ. ಈಗಾಗಲೇ ಒಮ್ಮೆ ಖಾಸಗಿಯವರಿಗೆ ಕಾಮಗಾರಿ ನೀಡಲಾಗಿದ್ದು, ಮತ್ತೊಮ್ಮೆ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಳೆದ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಸ್ಥಾಪನೆಯಾಗುತ್ತಾ ಕ್ರಿಕೆಟ್ ಸ್ಟೇಡಿಯಂ?

ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕೆಂಬ ಬಹುದಿನಗಳ ಬೇಡಿಕೆ ಇದೆ. ಅದಕ್ಕಾಗಿ ಜಿಲ್ಲಾ ಕ್ರೀಡಾಂಗಣದ ಬಳಿ 20 ಎಕರೆ ಜಾಗವನ್ನು ಈಗಾಗಲೇ ಮೀಸಲಿಡಲಾಗಿದೆ. ಆದರೆ ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವುದಕ್ಕೆ ಆಗುತ್ತಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು 100 ಎಕರೆಯಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಭರವಸೆ ನೀಡಿದ್ದಾರೆ. ಕ್ರೀಡಾ ಇಲಾಖೆಗೆ ಅವರೇ ಸಚಿವರಾಗಿರುವುದರಿಂದ ಜಿಲ್ಲೆಗೆ ಸ್ಟೇಡಿಯಂ ನಿರ್ಮಾಣಕ್ಕೆ ಅನುಕೂಲ ವಾತಾವರಣ ಇದೆ.

ಜಿಲ್ಲೆಯ ಬೇಡಿಕೆಗಳೇನು?: ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಗಣಿಬಾಧಿತ ಪ್ರದೇಶಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್, ಬಳ್ಳಾರಿ ಕೋಟೆ, ಸಂಗನಕಲ್ಲು ಗುಡ್ಡ ಸೇರಿದಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ, ಬಳ್ಳಾರಿ ನಗರಕ್ಕೆ ಶಾಶ್ವತ ಕುಡಿವ ನೀರಿನ ಸಮಸ್ಯೆಗೆ ಪರಿಹಾರ, ಕಂಪ್ಲಿ ಹಾಗೂ ಕುರುಗೋಡು ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸುವುದು, ಕೈಗಾರಿಕೆಗಳಿಗಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿನ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು.

ಸಿಗಲಿದೆಯೇ ಅನುದಾನ

ಕಳೆದ ಬಿಜೆಪಿ ಸರ್ಕಾರದ ಕೊನೇ ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಮೇಗಾಡೇರಿ ನಿರ್ಮಾಣಕ್ಕೆ 100 ಕೋಟಿ ರೂ. ನೀಡುವ ಭರವಸೆ ನೀಡಲಾಗಿತ್ತು. ಮೇಗಾಡೇರಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಡಿಪಿಆರ್ ಸಲ್ಲಿಸಿದ ನಂತರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿತ್ತು.

ಆದರೆ ಸರ್ಕಾರದಿಂದ ಅನುದಾನ ಬಂದಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಸಿಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ, ಜಿಲ್ಲಾ ಸಮಗ್ರ ಗಣಿಬಾಧಿತ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಪ್ರಗತಿಗೆ ಸಿದ್ದರಾಮಯ್ಯ ಸರ್ಕಾರ ಅನುದಾನ ನೀಡಬೇಕಿದೆ.

ಬಜೆಟ್‌ನಲ್ಲಿ ಸರ್ಕಾರ ಗ್ಯಾರಂಟಿ ಸ್ಕೀಂಗಳಿಗೆ ಮೊದಲ ಆದ್ಯತೆ ನೀಡಲಿದೆ. ಜತೆಗೆ ಬಳ್ಳಾರಿ ಅಭಿವೃದ್ಧಿಗೂ ಒತ್ತು ನೀಡುವಂತೆ ಸಿಎಂ ಜತೆ ಚರ್ಚಿಸಲಾಗಿದೆ. ಜೀನ್ಸ್ ಉದ್ಯಮಕ್ಕೆ ಉತ್ತೇಜನ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಬಿ. ನಾಗೇಂದ್ರ ಜಿಲ್ಲಾ ಉಸ್ತುವಾರಿ ಸಚಿವ ವಿದ್ಯುತ್ ದರ ಹೆಚ್ಚಳದಿಂದಾಗಿ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದರಿಂದಾಗಿ ಕೈಗಾರಿಕೆಗಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಎಫ್‌ಪಿಪಿಸಿಎ ವೆಚ್ಚವನ್ನು ಏಕಾಏಕಿ ಹೆಚ್ಚಿಸಲಾಗಿದೆ. ಎಪಿಎಂಸಿಯಲ್ಲಿ ಸೆಸ್ ಹೆಚ್ಚಳ ಮಾಡಲಾಗುತ್ತಿದೆ. ಅದರಿಂದ ರೈತರಿಗೆ ಪೆಟ್ಟು ಬೀಳಲಿದೆ.ಸಿ.ಶ್ರೀನಿವಾಸ್‌ರಾವ್ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಜನಪರ, ರೈತಪರ ಕಾಳಜಿವಹಿಸುವಂತಹ ಬಜೆಟ್ ಮಂಡನೆಯಾಗಬೇಕಿದೆ. ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಬಾರದು. ಭ್ರಷ್ಟಚಾರಮುಕ್ತ ಆಡಳಿತ ನೀಡುವ ಕೆಲಸ ಆಗಬೇಕಿದೆ.ಪುರುಷೋತ್ತಮಗೌಡ, ರೈತರ ಮುಖಂಡ ಯಾವುದೇ ಸರ್ಕಾರ ಬಂದರೂ ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. ಯಾವ ಪಕ್ಷದವರೂ ಬಜೆಟ್ ಮಂಡಿಸಿದರು ಬಡಜನರಿಗೆ ಆರ್ಥಿಕ ಹೊರೆ ತಪ್ಪಿದಲ್ಲ.ಸುರೇಶ್, ಸ್ಥಳೀಯ ನಿವಾಸಿ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net