ಬಳ್ಳಾರಿ : ರಾಜ್ಯದಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಹೈಕಮಾಂಡ್ ಚರ್ಚಿಸಿಲ್ಲ ಹಾಗೂ ಪ್ರಸ್ತಾಪ ಕೂಡ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಬದಲಾವಣೆಯ ಕೇವಲ ಮಾಧ್ಯಮದ ಕಪೊಕಲ್ಪಿತ ಅನಿಸಿಕೆಯಾಗಿವೆ. ಬದಲಾವಣೆಯ ವಿಷಯದ ಬಗ್ಗೆ ಯಾರು ಮಾತನಾಡಬಾರದು ಎಂದು ಹೈಕಮಾಂಡ್ ಕಟ್ಟುನಿಟ್ಟಿಗೆ ಸೂಚಿಸಿದೆ. ಆದ್ದರಿಂದ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡ ಮೌನವಾಗಿದ್ದಾರೆ. ರಾಜ್ಯದ ವಿವಿಧ ಇಲಾಖೆಯ ಸಚಿವರು ದೆಹಲಿಗೆ ಬೇರೆ ಬೇರೆ ಕೆಲಸಕ್ಕಾಗಿ ಹೋಗುವುದು ಸಾಮಾನ್ಯ. ನಾವೆಲ್ಲರೂ ಶಿಸ್ತಿನ ಪಕ್ಷದವರು ಪಕ್ಷದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಹೇಳಿದರು.
ಗ್ಯಾರಂಟಿಗಳಿಗೆ ಬದ್ಧ : ಸರ್ಕಾರದ ಮಹತ್ವ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ ಹಣವನ್ನು ಕೆಲವೇ ದಿನಗಳಲ್ಲೇ ಖಾತೆಗೆ ಹಾಕಲಾಗುವುದು. ಗ್ಯಾರಂಟಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮವಹಿಸಿದೆ. ಗ್ಯಾರಂಟಿಗಳಿಂದ ರಾಜ್ಯಕ್ಕೆ ಹೊರೆಯಾಗುವುದು ಬೇರೆ ವಿಚಾರ. ಆದರೆ, 58 ಸಾವಿರ ಕೋಟಿ ರೂ. ಹಣ ಎಂದರೆ ಸಣ್ಣ ವಿಚಾರವಲ್ಲ. ಜನರಿಗಾಗಿ ಗ್ಯಾರಂಟಿ ಪ್ರಾರಂಭಿಸಿದ್ದು ಬದ್ಧತೆಯಿಂದ ಮುಂದುವರೆಸುತ್ತವೆ. ಪಕ್ಷದ ಯಾವ ಶಾಸಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಆಗಲಿ ಹಾಗೂ ಕಡಿತ ಮಾಡಿ ಎಂಬುದಾಗಿ ಹೇಳಿಲ್ಲ. ದಲಿತ ನಿಗಮಗಳಿಗೆ ಅನುದಾನ ಬಿಡುಗಡೆಯಾಗುವ ಬಗ್ಗೆ ಬಜೆಟ್‌ನಲ್ಲಿ ಉತ್ತರ ದೊರೆಯಲಿದೆ ಎಂದರು.