ಬಳ್ಳಾರಿ : ಸಂಡೂರು ತಾಲೂಕಿನ ಸ್ವಾಮಿಮಲೈನ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ರಸ್ತೆ ಸಮೀಕ್ಷೆ ವೇಳೆ ಹೋರಾಟಗಾರರಿಗೂ ಹಾಗೂ ಕೆಐಒಸಿಎಲ್ ಬೆಂಬಲಿತ ಕೆಲ ವ್ಯಕ್ತಿಗಳ ನಡುವೆ ಶುಕ್ರವಾರ ವಾಗ್ವಾದ ನಡೆದಿದೆ.
ತಾಲೂಕಿನ ನರಸಿಂಗಪುರ ಗ್ರಾಮದಿಂದ ದೇವದಾರಿ ಗಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆಗಾಗಿ ತೆರಳಿದ್ದರು.
ಕೆಐಒಸಿಎಲ್‌ನ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದ ಕೆಲ ವ್ಯಕ್ತಿಗಳು, ಹೋರಾಟಗಾರರೊಂದಿಗೆ ವಾಗ್ವಾದ ನಡೆಸಿದರು. ಸ್ಥಳದಿಂದ ಮೇಲೇಳುವಂತೆ ಒತ್ತಾಯಿಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ರೈತರು ಪ್ರತಿಭಟನೆ ತೀವ್ರಗೊಳಿಸಿದರು. ಈ ವೇಳೆ ಹೋರಾಟಗಾರರ ಮೇಲೆ ಹಲ್ಲೆ ನಡೆಯುವ ಪ್ರಯತ್ನಗಳು ನಡೆದವಾದರೂ, ಜನಸಂಗ್ರಾಮ ಪರಿಷತ್‌ನ ಮುಖಂಡರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಯಿತು.
ಒಂದು ಲಕ್ಷ ಮರಗಳ ಹರಣಕ್ಕೆ ಕಾರಣವಾಗಲಿರುವ ದೇವದಾರಿ ಗಣಿಯನ್ನು ಆರಂಭದಿಂದಲೂ ವಿರೋಧಿಸಿತ್ತಿರುವ ಜನಸಂಗ್ರಾಮ ಪರಿಷತ್, ರಾಜ್ಯ ರೈತ ಸಂಘ, ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಎಂದಿನಂತೆ ಸರ್ವೆ ನಡೆಯುವ ಸ್ಥಳದಲ್ಲಿ ಪ್ರತಿಭಟಿಸಿದರು.