ಪೌರಕಾರ್ಮಿಕರು ತಪ್ಪದೇ ಸುರಕ್ಷಾ ಪರಿಕರ ಧರಿಸಿ

Published on

ಬಳ್ಳಾರಿ ; ಜಿಲ್ಲೆಯ ಪೌರ ಕಾರ್ಮಿಕರು ಸ್ವಚ್ಛತೆ ವೇಳೆ ತಪ್ಪದೇ ಸುರಕ್ಷಾ ಪರಿಕರಗಳನ್ನು ಧರಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಹೇಳಿದರು.

ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಪೌರ ಕಾರ್ಮಿಕರೊಂದಿಗೆ ಶುಕ್ರವಾರ ಆಯೋಜಿಸಿದ್ದ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷತಾ ಪರಿಕರ ಧರಿಸದೇ ಕಾರ್ಯನಿರ್ವಹಿಸುವುದು ಕಂಡುಬಂದಿದ್ದು, ಆರೋಗ್ಯದ ದೃಷ್ಠಿಯಿಂದ ಧರಿಸಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ, ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ತಲುಪುತ್ತಿದೆಯೇ ಎಂಬುದರ ಮೇಲುಸ್ತುವಾರಿ ಪರಿಶೀಲನೆ ಕೈಗೊಳ್ಳುವುದು ಆಯೋಗದ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಳಿಕ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನ, ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್‌ಟಾಪ್, ವೇತನ ವಿಳಂಬ, ಸುಸ್ಸಜ್ಜಿತ ವಿಶ್ರಾಂತಿ ಕೊಠಡಿ, ನಿವೇಶನ ಹಾಗೂ ವಸತಿ ಕಲ್ಪಿಸುವಂತೆ ಪೌರ ಕಾರ್ಮಿಕರು ಆಯೋಗದ ಮುಂದೆ ಪ್ರಸ್ತಾಪಿಸಿದರು. ಸರ್ಕಾರದೊಂದಿಗೆ ಚರ್ಚಿಸಿ ಈ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಆಯೋಗದ ಕಾರ್ಯದರ್ಶಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net