ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಜ.8ರಂದು

VS Ugrappa
ಎಸ್.ವಿ.ಉಗ್ರಪ್ಪ, ಮಾಜಿ ಸಂಸದ.
Published on

ಬಳ್ಳಾರಿ: ಮೀಸಲಾತಿ ಭೀಕ್ಷೆ ಅಲ್ಲ ಎನ್ನುವ ಸಂದೇಶದೊಂದಿಗೆ ಚಿತ್ರದುರ್ಗದಲ್ಲಿ ಜ.8ರಂದು ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಪರಿಶಿಷ್ಟ ಜಾತಿಯಲ್ಲಿ 102 ಉಪಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ 51 ಉಪಜಾತಿಗಳು ಬರಲಿದೆ. ಈ ಸಮಾವೇಶಕ್ಕೆ 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠ ರಾಹುಲ್‌ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವ ಶ್ರೀರಾಮುಲು ವಿರುದ್ಧ ಚಾರ್ಜ್‌ಶೀಟ್ ಹಾಗಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆನಂದ ಸಿಂಗ್, ಪ್ರಭು ಚವ್ಹಾಣ ಮೊದಲುಗೊಂಡು ಬಹುತೇಕ ಬಿಜೆಪಿ ನಾಯಕರ ಮೇಲೆ ಅನೇಕ ಪ್ರಕರಣಗಳಿವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ತಾಯಿ ಯಾರು ಅಂತ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಇದೊಂದು ಅಪಚಾರದ ಹೇಳಿಕೆ. ಕಾಂಗ್ರೆಸ್ ಎಲ್ಲರಿಗೂ ತಾಯಿ ಸಮಾನ ಎಂದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎನ್ನು ಬಿಜೆಪಿ ಆ ಜನರ ಮೂಗಿಗೆ ತುಪ್ಪ ಸವರಿದೆ. ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ಸಾಧ್ಯವಿಲ್ಲ. ಆದರೆ, ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ಶೇ.56ಕ್ಕೇರಲಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರದಿಂದ ಶೇ.10 ಮೀಸಲಾತಿ ನೀಡಲಾಗಿದೆ. ಇದೊಂದು ಸಂವಿಧಾನ ವಿರೋಧಿ ಕೆಲಸ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಗುಜರಾತ್ ಜನ 27ವರ್ಷಗಳಿಂದ ಬಿಜೆಪಿಗೆ ಯಾವ ಕಾರಣಕ್ಕೆ ಮತ ನೀಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೆ 15 ಲಕ್ಷ ರೂ. ಹಂಚುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ನಡೆದುಕೊಳ್ಳಲಿಲ್ಲ. ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲಿ ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯಲಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗಂಡಾಂತರ ಇದೆ ಎಂದರು.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಾನೂ ಕೂಡ ಸ್ಪರ್ಧಿಸಲು ಅರ್ಜಿ ಹಾಕಿದ್ದೇನೆ. ಪಕ್ಷ ಬಯಸಿದರೆ ಸ್ಪರ್ಧೆ ಮಾಡುತ್ತೇನೆ. ಶ್ರೀರಾಮುಲು ಪಲಾಯನ ಮಾಡಬಾರದು. ಜನ ತೀರ್ಮಾನ ಮಾಡುತ್ತಾರೆ. ಡಿಕೆಶಿ -ಸಿದ್ದರಾಮಯ್ಯ ಹೊಂದಾಣಿಕೆಯಿಂದ ಇದ್ದಾರೆ. ಆದರೆ ಬಿಜೆಪಿ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ.| ವಿ.ಎಸ್.ಉಗ್ರಪ್ಪ, ಬಳ್ಳಾರಿ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net