ಬಳ್ಳಾರಿ ; ಒಣ ಮೆಣಸಿನಕಾಯಿ ದರ ಕುಸಿತದಿಂದ ರೈತರು ಕಂಗಾಲು ಆಗಿದ್ದಾರೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಜತೆಗೂಡಿ ಒಣಮೆಣಸಿನಕಾಯಿ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜಾಧ್ಯಕ್ಷ ಆರ್.ಮಾಧವ ರೆಡ್ಡಿ ಆಗ್ರಹಿಸಿದರು.
ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೆರೆಯ ಆಂಧ್ರಪ್ರದೇಶದಲ್ಲಿನ ಒಣಮೆಣಸಿನಕಾಯಿ ಬೆಳೆಯನ್ನು ಕ್ವಿಂಟಾಲ್‌ಗೆ 11,781 ರೂ. ಗಳಂತೆ ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಒಣ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆಯಡಿ ಖರೀದಿಸುವಂತೆ ರಾಜ್ಯದ ಎಲ್ಲ ಸಂಸದರು ಮತ್ತು ಶಾಸಕರು ರೈತರ ಧ್ವನಿಯಾಗಿ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕಿ, ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ರಾಜ್ಯ ರೈತ ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅತೀ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯುವ ಜಿಲ್ಲೆ ಬಳ್ಳಾರಿಯಾಗಿದೆ. ರೂಪನಗುಡಿ, ಕೊಳಗಲ್ಲು, ಕಂಪ್ಲಿ, ಕುರುಗೋಡು, ಸಿರಗುಪ್ಪ ಸೇರಿದಂತೆ ತುಂಗಭದ್ರ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ2023-24ನೇ ಸಾಲಿನಲ್ಲಿ 39 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಸರಿಸುಮಾರು 1.96 ಲಕ್ಷ ಟನ್ ಮೆಣಸಿನಕಾಯಿ ಬೆಳೆಯಲಾಗಿದೆ. ರಾಜ್ಯದ ಒಟ್ಟು ಮೆಣಸಿನಕಾಯಿ ಉತ್ಪಾದನೆಯಲ್ಲಿ ಶೇ.22% ರಷ್ಟು ಬಳ್ಳಾರಿಯಿಂದಲೇ ಆಗಿದೆ ಎಂದು ತಿಳಿಸಿದರು. ಪದಾಧಿಕಾರಿಗಳಾದ ಬಸವರಾಜ ಸ್ವಾಮಿ, ಲೇಪಾಕ್ಷಿ, ಪಂಪನಗೌಡ, ಬಸರೆಡ್ಡಿ, ಸುರೇಂದ್ರ, ವಿರುಪಾಕಿ , ಸಮೀರ್ ಇದ್ದರು.