

ಶ್ರೀಕಾಂತ ಅಕ್ಕಿ ಬಳ್ಳಾರಿ
ಗಣಿನಾಡಿಗೆ ಒಂದಿಲ್ಲೊಂದು ಕಂಟಕಗಳು ಕಾಡುತ್ತಲೇ ಇವೆ. ಕರೊನಾ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಶುರುವಾಯಿತು. ಈಗ ಅವಳಿ ಜಿಲ್ಲೆಯಲ್ಲಿ ಕರೊನಾ ಬಂದುಹೋದ ನಂತರ ಮಕ್ಕಳಲ್ಲಿ ಮಿಸ್-ಸಿ (ಎಂಐಎಸ್-ಸಿ) ಕಾಯಿಲೆ ಹೆಚ್ಚಾಗುತ್ತಿದೆ.
ಎರಡು ದಿನದ ಹಿಂದೆ ಒಂದೂವರೆ ವರ್ಷದ ಗಂಡುಮಗುವೊಂದು ಈ ರೋಗಕ್ಕೆ ಬಲಿಯಾಗಿದೆ. ಬಳ್ಳಾರಿ-ವಿಜಯನಗರ ಜಿಲ್ಲೆ ವ್ಯಾಪ್ತಿ 35 ಮಕ್ಕಳಲ್ಲಿ ಈ ರೋಗ ಕಾಣಿಸಿದೆ. ಇವರಿಗೆಲ್ಲ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ಮೂರನೇ ಅಲೆ ಆತಂಕದ ನಡುವೆ ಮಿಸ್-ಸಿ ತೀವ್ರತೆಯನ್ನು ಜಿಲ್ಲಾಡಳಿತ ಎದುರಿಸಬೇಕಿದೆ.
ಏನಿದು ಮಿಸ್-ಸಿ ? : ಮಕ್ಕಳಿಗೆ ಕರೊನಾ ಬಂದು ಹೋಗಿರುತ್ತದೆ. ಇದಾದ ಎರಡ್ಮೂರು ವಾರಗಳ ಬಳಿಕ ಇದ್ದಕ್ಕಿದ್ದಂತೆ ಉಸಿರಾಟ ಸಮಸ್ಯೆ ಕಾಣಿಸುತ್ತದೆ. ಪರೀಕ್ಷೆ ಮಾಡಿದಾಗ ಶ್ವಾಸಕೋಶದಲ್ಲಿ ನೀರು ತುಂಬಿರುತ್ತದೆ. ಮೂತ್ರಪಿಂಡ, ಲಿವರ್ ಸಹಿತ ದೇಹದ ಬಹುತೇಕ ಅಂಗಗಳಿಗೆ ತೊಂದರೆ ಎದುರಾಗುತ್ತದೆ. ಇದನ್ನು ಎಂಐಎಸ್-ಸಿ ಎನ್ನುತ್ತಾರೆ. ಈ ಮಕ್ಕಳನ್ನು ಪರೀಕ್ಷಿಸಿದಾಗ ಅವರಲ್ಲಿ ಕೋವಿಡ್ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂದರೆ ಕೋವಿಡ್ ಬಂದುಹೋಗಿರುವುದು ಮನೆಯವರಿಗೆ ಗೊತ್ತಾಗುವುದಿಲ್ಲ. ಮಿಸ್-ಸಿ ಬಂದಾಗಲೇ ಮಗುವಿಗೆ ಕರೊನಾ ಬಂದುಹೋಗಿದೆ ಎಂಬುದು ಖಚಿತವಾಗುತ್ತದೆ. ಗಣಿ ಜಿಲ್ಲೆಯಲ್ಲಿ ಈವರೆಗೆ 3,500 ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಈ ಪೈಕಿ 35 ಮಕ್ಕಳಲ್ಲಿ ಮಿಸ್-ಸಿ ಕಂಡು ಬಂದಿದೆ. ಇಂಥ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿದ್ದು, ಪಾಲಕರಲ್ಲಿ ಕಳವಳ ಮೂಡಿದೆ.
ಇನ್ನೂ ಭೀಕರ ಎಎನ್‌ಇ-ಸಿ
ಮಿಸ್-ಸಿಯನ್ನು ಮೀರಿದ ರೋಗಕ್ಕೆ ಎಎನ್‌ಇ-ಸಿ ಎಂದು ಕರೆಯಲಾಗುತ್ತದೆ. ಈ ರೋಗ ಕೂಡ ಗಣಿನಾಡಿನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಬಾಲಕನಲ್ಲಿ ಮಿಸ್-ಸಿ ಕಂಡ ಬಳಿಕ, ಮತ್ತೊಮ್ಮೆ ಪರೀಕ್ಷಿಸಿದಾಗ ಎಎನ್‌ಇ-ಸಿ ಕಂಡು ಬಂದಿದೆ. ಈ ರೋಗವು ನೇರವಾಗಿ ಮಕ್ಕಳ ಮೆದುಳಿನ ಮೇಲೆ ನೇರ ದಾಳಿ ಮಾಡುತ್ತದೆ. ಈ ಬಾಲಕನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ.
ಬಳ್ಳಾರಿ- ವಿಜಯನಗರ ವ್ಯಾಪ್ತಿಯಲ್ಲಿ ಕರೊನಾ ಹೋದ ಬಳಿಕ ಮಕ್ಕಳಲ್ಲಿ ಮಿಸ್-ಸಿ ರೋಗ ಲಕ್ಷಣಗಳು ಕಾಣಿಸಿವೆ. ಇಂತಹ ಮಕ್ಕಳಿಗೆ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
| ಡಾ.ಎಚ್.ಎಲ್.ಜನಾರ್ದನ್ ಡಿಎಚ್‌ಒ, ಬಳ್ಳಾರಿ
ನನ್ನ ಮಗನಿಗೆ ಕರೊನಾ ಬಂದುಹೋಗಿದ್ದು ಗೊತ್ತಾಗಿಲ್ಲ. ಆ ನಂತರ ಏಕಾಏಕಿ ಉಸಿರಾಟ ಸಮಸ್ಯೆ ಕಾಣಿಸಿತು. ವಿಮ್ಸ್ ಗೆ ಹೋದಾಗ ವೈದ್ಯರು ತಿಳಿಸಿದ ಮೇಲೆಯೇ ನಮ್ಮ ಮಗುವಿಗೆ ಕೋವಿಡ್ ಬಂದುಹೋಗಿದ್ದು ತಿಳಿಯಿತು. ಈಗ ಮಿಸ್-ಸಿ ರೋಗ ಕಾಣಿಸಿದೆ ಎಂದು ವೈದ್ಯರು ಹೇಳಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
| ಹೆಸರು ಹೇಳಲು ಇಚ್ಛಿಸದ ಪಾಲಕ ಬಳ್ಳಾರಿ