ಬಳ್ಳಾರಿ : ಸಮಾಜದಲ್ಲಿ ಪಿಡುಗಾಗಿ ಪರಿಗಣಿಸಿರುವ ಬಾಲ್ಯ ವಿವಾಹ ಪ್ರಕರಣಗಳ ನಿಯಂತ್ರಣವು ಸರ್ಕಾರ, ಸ್ಥಳೀಯ ಸಂಘ-ಸಂಸ್ಥೆಗಳ ಜತೆಗೆ ಪ್ರತಿಯೊಬ್ಬರ ಸಾಂಘಿಕ ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಕ್ಕಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಎಸಿಎಲ್-ಕೆ ಸಹಯೋಗದೊಂದಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಸವಾಲುಗಳು ಮತ್ತು ಪರಿಹಾರಗಳು’ ಕುರಿತು ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಿತಾಸಕ್ತಿಗೆ ಸಮಾಜದ ಎಲ್ಲ ಭಾಗಿದಾರರು ಒಟ್ಟಾಗಿ ಬೆರೆತು ಬಾಲ್ಯ ವಿವಾಹ ನಿಯಂತ್ರಣದ ದೃಢ ಸಂಕಲ್ಪ ಹೊಂದಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕರೂ ಕೈಜೋಡಿಸಿ ಕೆಲಸ ನಿರ್ವಹಿಸಿದಾಗ ಮಾತ್ರ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲ್ಯ ವಿವಾಹವು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದಾಗುವ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳ ಕುರಿತು ಹಳ್ಳಿ-ಗ್ರಾ.ಪಂ ಮಟ್ಟಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವ ಅವಶ್ಯಕತೆ ಇದ್ದು, ಬಾಲ್ಯವಿವಾಹ ಪ್ರಕರಣ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸಿ ಮಾಹಿತಿ ನೀಡುವುದರ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳನ್ನು ಗುರುತಿಸಿ ಅವಲೋಕನ ಮಾಡಿ, ಬಾಲ್ಯ ವಿವಾಹ ನಿಷೇಧಿಸಲು ಕೈಗೊಳ್ಳಬೇಕಾದ ಕಾರ್ಯಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳನ್ನು ನಿಯಂತ್ರಿಸಲು ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಬೇಕು. ಸಾರ್ವಜನಿಕರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು ಎಂದರು.
ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ ಮಾತನಾಡಿದರು. ಇದೇ ವೇಳೆ ಗಣ್ಯರು “ನಿಲ್ಲಿಸಿ ಬಾಲ್ಯ ವಿವಾಹ” ಎನ್ನುವ ಫಲಕ ಬಿಡುಗಡೆಗೊಳಿಸಿದರು. ಪೊಲೀಸ್ ಇಲಾಖೆ ವತಿಯಿಂದ ಬಾಲ್ಯ ವಿವಾಹ ತಡೆ ವಿಡಿಯೋ ತುಣುಕುಗಳ ಪ್ರದರ್ಶಿಸಲಾಯಿತು. ಬಳಿಕ 2025ರ ಮಕ್ಕಳ ಸ್ನೇಹ ಹಾಗೂ ವಾಲ್ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.