

ಬಳ್ಳಾರಿ: ಬಾಲ ಕಾರ್ಮಿಕ ಪದ್ಧತಿ ತಡೆಯುವಲ್ಲಿ ಪಾಲಕರು ಜಾಗೃತಿ ವಹಿಸಬೇಕು ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ಹೇಳಿದರು. ನಗರದ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 1986ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕ ಪದ್ಧತಿಯು ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಮಕ್ಕಳನ್ನು ದೈಹಿಕ, ನೈತಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣ ಅವಕಾಶಗಳನ್ನು ಮೊಟಕುಗೊಳಿಸುತ್ತದೆ. ಈ ಕುರಿತು ಮಕ್ಕಳು ಮತ್ತು ಪಾಲಕರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.
6 ರಿಂದ 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ, 18 ವರ್ಷ ವಯಸ್ಸಿನ ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವುದು ಕಂಡಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಬೇಕು. ಬಾಲಾ ಕಾರ್ಮಿಕ ಪದ್ಧತಿ ತಡೆಗಟ್ಟಲು ಎಲ್ಲಾ ಇಲಾಖೆಗಳು ಕೈಜೋಡಿಸಿಸಬೇಕೆಂದು ಮನವಿ ಮಾಡಿದರು.
ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎ.ಮೌನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯಲ್ಲಿ ಹಲವಾರು ತಿದ್ದುಪಡಿಗಳಾಗಿವೆ. ಅಧಿಕಾರಿಗಳು ಅವುಗಳ ಮಾಹಿತಿ ಪಡೆಯಬೇಕು. ಬಾಲಕಾರ್ಮಿಕ ಮಕ್ಕಳ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಕಾರ್ಮಿಕ ಇಲಾಖೆ ಉಪ ವಿಭಾಗ 1ರ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಉಪ ವಿಭಾಗ 2 ರ ಕಾರ್ಮಿಕ ಅಧಿಕಾರಿ ಮಾರಿಕಾಂಬ ಹುಲಕೋಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಕೀನಾ, ಜಿಲ್ಲಾ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್‌ರಾವ್, ಗೌರವ ಕಾರ್ಯದರ್ಶಿ ಯಶವಂತ್ ರಾಜ್ ನಾಗಿರೆಡ್ಡಿ, ರಾಘವೇಂದ್ರಭಟ್ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.