ಬಳ್ಳಾರಿ, ರಕ್ತದಾನ ಪುಣ್ಯದ ಕಾರ್ಯ

Published on

ಬಳ್ಳಾರಿ : ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ದೇಹದಲ್ಲಿ ಸೇರಿಸುವುದು, ಇಂತಹ ಪುಣ್ಯದ ಕಾರ್ಯ ಮಾಡುವ ಮನಸ್ಸು ಪ್ರತಿಯೊಬ್ಬರಿಗೂ ಬರಲಿ ಎಂದು ಡಿಎಚ್‌ಒ ಡಾ.ವೈ. ರಮೇಶಬಾಬು ತಿಳಿಸಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಡೆದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿದಿನ ಅಪಘಾತಗಳಿಂದ ಗಾಯಗೊಂಡವರಿಗೆ ಹಾಗೂ ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ, ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಮತ್ತು ಥಲಸೀಮಿಯಾ ದಂತ ಕಾಯಿಲೆಯಿಂದ ಬಳಲುತ್ತಿರುವವರಿಗೆ ನಿರಂತರವಾಗಿ ರಕ್ತದ ಅವಶ್ಯಕತೆ ಇದ್ದು, ಈ ಹಿನ್ನಲೆಯಲ್ಲಿ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಗೆ ನಿರಂತರವಾಗಿ ಸಹಕಾರಿಯಾಗುವ ಅಂಶದ ಹಿನ್ನೆಲೆಯಲ್ಲಿ 18 ವರ್ಷ ತುಂಬಿದ ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆ, ಮಹಿಳೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ವಿ. ಇಂದ್ರಾಣಿ ಮಾತನಾಡಿ, ಯಾವುದೆ ಬೇಧ-ಭಾವ, ಸಂಕೋಚಗಳಿಲ್ಲದೆ, ಜಾತಿ ಧರ್ಮವನ್ನು ಮೀರಿ ಬದುಕಿರುವಾಗ ದಾನ ಮಾಡಬಹುದಾದ ವಸ್ತು ರಕ್ತವಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ಪುರುಷ ಮತ್ತು ಮಹಿಳೆ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಿ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸುವಂತೆ ವಿನಂತಿಸಿದರು.

ಓಂಪ್ರಕಾಶ-100, ಮಂಜುನಾಥ -50, ಜೆ.ನಿತ್ಯಾನಂದ -31, ಎಂ. ಪುರುಷೋತ್ತಮ-30, ರವಿ ಚೆಳ್ಳಗುರ್ಕಿ-29 , ಬಿ.ಆಶೀಶ್-25 , ನಾಗರಾಜ್- 25 ಬಾರಿ ಸೇರಿದಂತೆ ಒಟ್ಟಾರೆ ಕಾರ್ಯಕ್ರಮದಲ್ಲಿ 25ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net