ಬಳ್ಳಾರಿ : ಮೀಟರ್ ಬಡ್ಡಿ ದಂಧೆ ವ್ಯವಹಾರಕ್ಕೆ ಕಡಿವಾಣ ಹಾಕಲು ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಜತೆ ಸಭೆ ಆಯೋಜಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಮೀಟರ್ ಬಡ್ಡಿ ದಂಧೆ ಎಂಬ ಶೀರ್ಷಿಕೆಯ ವಿಜಯವಾಣಿ ವರದಿಗೆ ಪ್ರತಿಕ್ರಿಯಿಸಿದರು. ಮೊದಲು ವಿವಿಯ ಬೋಧಕರ ಜತೆ ಸಭೆ ಆಯೋಜಿಸಿ ಯಾರೆಲ್ಲ ಈ ವ್ಯವಹಾರದಲ್ಲಿ ತೊಡಗಿದ್ದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಅಲ್ಲದೆ, ಎಲ್ಲ ಸಿಬ್ಬಂದಿ ಬಳಿ ಮುಚ್ಚಳಿಕೆ ಪತ್ರ ಬರೆದು ಕೊಡುವಂತೆ ಆದೇಶಿಸಿಲಾಗುವುದು. ಈ ವ್ಯವಹಾರದಲ್ಲಿ ಕೆಲ ಬೋಧಕೇತರ ಸಿಬ್ಬಂದಿ ತೊಡಗಿರುವುದು ಗಮನಕ್ಕೆ ಬಂದಿದೆ. ಅವರು ಎಲ್ಲರೂ ಈ ವ್ಯವಹಾರ ಇಲ್ಲಿಗೆ ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಲಿದ್ದಾರೆ ಎಂದು ಎಚ್ಚರಿಸಿದರು. ಮೀಟರ್ ಬಡ್ಡಿ ದಂಧೆಯಲ್ಲಿ ವಿವಿಯ ಪ್ರಾಧ್ಯಾಪಕರೊಬ್ಬರ ಮೇಲೆ ಆರೋಪ ತನಿಖೆಯಲ್ಲಿ ಸಾಬೀತಾದರೆ ಹುದ್ದೆಯಿಂದ ಅಮಾನತುಗೊಳಿಸಲಾಗುವುದು ಎಂದು ಹೇಳಿದರು.
ಅಲ್ಲದೆ, ಇತ್ತೀಚೆಗೆ ಹೊರ ಗುತ್ತಿಗೆ ನೌಕರರು ಇಬ್ಬರು ವಿವಿಯ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದರಿಂದ ಹುದ್ದೆಯಿಂದ ಅಮಾನತುಗೊಳಿಸಿರುವೆ ಎಂದರು.