ನಗರದ ವಿವಿಧಡೆ ಆಯೋಗದ ಅಧ್ಯಕ್ಷ ಭೇಟಿ

Published on

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆ, ಕೇಂದ್ರ ಕಾರಾಗೃಹ, ಬಿಮ್ಸ್ ಹಾಗೂ ನಿರಾಶ್ರಿತ ಪರಿಹಾರ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯ ಎಸ್.ಕೆ.ವೆಂಟಿಗೋಡಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಜಿಲ್ಲಾಸ್ಪತ್ರೆಯ ಆವರಣದ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಒಬಿಜಿ ವಾರ್ಡ್, ಪ್ರಸೂತಿ ವಿಭಾಗದ ಮುಂದೆ ಇದ್ದ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ? ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬ ತೋರುತ್ತಿದ್ದಾರೆಯೇ? ಎಂದು ವಿಚಾರಿಸಿದರು. ನಂತರ, ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದರು. ಅಡುಗೆ ಕೋಣೆ ಸೇರಿದಂತೆ ಹಲವೆಡೆ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಬಿಮ್ಸ್ ಹೊರರೋಗಿ ಮತ್ತು ಒಳರೋಗಿಗಳ ಬಳಿ ಸಂವಾದ ನಡೆಸಿದರು. ಆರೋಗ್ಯ ಸೇವೆ ನೀಡುವಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆಯೇ? ಎಂದು ರೋಗಿಗಳ ಸಂಬಂಧಿಕರನ್ನು ಪ್ರಶ್ನಿಸಿದರು. ನಂತರ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಊಟ, ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಆಯೋಗದ ಅಧ್ಯಕ್ಷರು ಜಿಲ್ಲೆಗೆ ಭೇಟಿ ನೀಡುವುದನ್ನು ವಾರದ ಮುಂಚೆಯೇ ಮನಗಂಡಿದ್ದ ವೈದ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಪರಿಶೀಲಿಸುವ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದರು. ಅಲ್ಲದೆ, ಬಹುತೇಕ ಕಡೆ ಆಯೋಗದ ಸದಸ್ಯರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಚಿಸುವ ವಿಷಯಗಳ ಸ್ಥಳವನ್ನೆ ಪರಿಶೀಲಿಸಿ ಹೊರ ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net