ಆರೋಗ್ಯ ಕೇಂದ್ರಗಳ ಪ್ರಮಾಣೀಕರಣ ಕಡ್ಡಾಯ

Published on

ಬಳ್ಳಾರಿ : ಜಿಲ್ಲೆಯ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳ ಅಡಿ ಪ್ರಮಾಣೀಕರಣಕ್ಕೆ ಕಡ್ಡಾಯವಾಗಿ ಒಳಪಡಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳ ಅಡಿಯಲ್ಲಿ ಪ್ರಮಾಣೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮಹತ್ವ ಪೂರ್ಣ ಕಾರ್ಯ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ, ಔಷಧಿಗಳ ಲಭ್ಯತೆ, ದಾಖಲಾತಿ ನಿರ್ವಹಣೆ, ವೈದ್ಯಕೀಯ ತ್ಯಾಜ್ಯ ವಿಲೇವಾರಿ, ತಾಯಿ ಮಗುವಿನ ಆರೈಕೆ, ಕುಟುಂಬ ಕಲ್ಯಾಣ ಸೇವೆಗಳು, ಸಾಂಕ್ರಾಮಿಕ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಪ್ರಯೋಗಾಲಯ ಸೇವೆಗಳು ಸೇರಿದಂತೆ ಮಾನದಂಡಗಳ ಅನುಗುಣವಾಗಿ ಸಮರೋಪಾದಿಯಲ್ಲಿ ಕ್ರಮವಹಿಸುವ ಮೂಲಕ ಮುಂಚೂಣಿ ಜಿಲ್ಲೆಯಾಗಿ ಮಾಡಲು ನಿಗಾವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕುಷ್ಟರೋಗ ಪ್ರಕರಣಗಳ ನಿರ್ಮೂಲನೆಗಾಗಿ ಸಂಡೂರು ತಾಲೂಕಿನ ಚೋರನೂರು ಮತ್ತು ಬಂಡ್ರಿ ವ್ಯಾಪ್ತಿಯಲ್ಲಿ ಹಾಗೂ ಪ್ರಕರಣಗಳು ಕಂಡು ಬಂದ ಗ್ರಾಮಗಳಲ್ಲಿ ಹೆಚ್ಚಿನ ಜಾಗೃತಿಯನ್ನು ಮನೆ ಭೇಟಿಯ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರ ಜತೆಗೆ ಶೂನ್ಯಕ್ಕೆ ತರಲು ಶ್ರಮಿಸುವಂತೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಆರೈಕೆ ಕುರಿತು ಕುಟುಂಬದ ಸದಸ್ಯರಿಗೆ ಅರಿವು ಮೂಡಿಸಲು 12 ಮಾರಕ ರೋಗಗಳ ಲಸಿಕೆ ಕುರಿತು ಗ್ರಾಮ ಮಟ್ಟದಲ್ಲಿ ಸಿಮಂತ ಕಾರ್ಯಕ್ರಮ ಏರ್ಪಡಿಸಿ ಜಾಗೃತಿ ನೀಡಲು ಕ್ರಿಯಾಯೋಜನೆ ರೂಪಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net