

ಬಳ್ಳಾರಿ : ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರೋಕ್ಷವಾಗಿ ವಾಗ್ದಳಿ ನಡೆಸಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವಲ್ಲಿ ರಾಜ್ಯ ಸರ್ಕಾರ ಮೊದಲ ಸ್ಥಾನದಲ್ಲಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ರಾಜ್ಯದಲ್ಲಿ ಪರಭಾಷಿಕರ ಆಳ್ವಿಕೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನವು ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಸ್ಥಾನ ನೀಡಿದೆ. ಹಾಗಾಗಿ ನಮ್ಮ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ ಪ್ರತಿನಿಧಿಸುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಒಂದಾಗಬೇಕಿದೆ. ಸಂವಿಧಾನದಡಿ ಎಲ್ಲ ಭಾಷೆಗಳಿಗೂ ಸಮಾನ ಗೌರವ ಕಲ್ಪಿಸಿದೆ. ಕೇವಲ ಒಂದು ಭಾಷೆಯನ್ನು ಮಾತನಾಡಬೇಕು ಎಂಬುದು ಸಂವಿಧಾನಕ್ಕೆ ವಿರುದ್ಧವಾದ ಸಂಗತಿಯಾಗಿದೆ. ಕನ್ನಡ ಭಾಷೆಯನ್ನು ಕಡೆಗಣಿಸುವಂತಹ ಪ್ರಯತ್ನಗಳ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.
ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ. ಕನ್ನಡಿಗರಾದ ನಾವು ಕರ್ನಾಟಕದ ಇತಿಹಾಸ ತಿಳಿದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಜಿಲ್ಲೆಯು ವೈವಿಧ್ಯತೆಯಿಂದ ಕೂಡಿದೆ. ಕನ್ನಡ, ತೆಲುಗು, ಉರ್ದು ಭಾಷೆ ಒಳಗೊಂಡಿದ್ದು, ಎಲ್ಲ ಸಂಸ್ಕೃತಿಗಳ ಸಮ್ಮಿಲನ ಒಳಗೊಂಡಿದೆ ಎಂದು ಬಣ್ಣಿಸಿದರು.
ಸ್ತಬ್ಧಚಿತ್ರಗಳ ಮೆರವಣಿಗೆ : ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ದಿಂದ ವಿಧಾನ ಸೌಧ, ತೋಟಗಾರಿಕೆ ಇಲಾಖೆಯಿಂದ ಪರಿಸರ ಸಂರಕ್ಷಣೆಯ ಗಿಡಗಳು ಪ್ರದರ್ಶಿಸಿದರೆ ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ಮುಕ್ತ ನಗರ-ಸ್ವಚ್ಛ ನಗರ ವಿಷಯದೊಂದಿಗೆ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಗಳನ್ನು ಉಳಿಸಿ, ಮಗಳನ್ನು ಬೆಳೆಸಿ ಎನ್ನುವ ಘೋಷ ವಾಕ್ಯದ ಸ್ತಬ್ಧಚಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂೆ ಹಾಗೂ ಇತರೆ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಮಕ್ಕಳು ಧರಿಸಿದ್ದ ವಿವಿಧ ಮಹನೀಯರ ವೇಷಭೂಷಣ ಸೇರಿದಂತೆ ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ಬಳಿಕ ವಿವಿಧ ಕಲಾ ತಂಡಗಳ ವಾದ್ಯಗಳ ಕಲರವದೊಂದಿಗೆ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಪ್ರೇಮ ಮೂಡಿಸಲಾಯಿತು.
ವಿವಿಧ ಕನ್ನಡ ಪರ ಸಂಘಟನೆಗಳಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಬಳ್ಳಾರಿಯ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಭಾವಚಿತ್ರ ವಾಹನ ಕಾರ್ಯಕ್ರಮದ ವಿಶೇಷವಾಗಿತ್ತು. ಕನ್ನಡ ನಾಡು-ನುಡಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಮೊದಲ ಕನ್ನಡದ ಶಾಸನಗಳಲ್ಲಿ ಒಂದಾದ ಹಲ್ಮಿಡಿ ಶಾಸನದ ಪ್ರತಿರೂಪವನ್ನು ಸಚಿವರು ಅನಾವರಣಗೊಳಿಸಿದರು.