ಬಳ್ಳಾರಿ ; ಜಿಲ್ಲೆ ಹಾಗೂ ನಗರಾದ್ಯಂತ ಮುಸ್ಲಿಂ ಸಮುದಾಯವು ತ್ಯಾಗ -ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮ ಸಡಗರದಿಂದ ಆಚರಿಸಿದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ನಿರ್ಗತಿಕರು ಹಾಗೂ ಬಡವರಿಗೆ ತಮ್ಮ ಕೈಲಾಗುವ ದಾನ ಧರ್ಮ ಮಾಡಿ ಸಂತೃಪ್ತರಾದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಚಿಣ್ಣರಿಂದು ಹಿಡಿದು ಅತ್ಯಂತ ಕಿರಿಯ ವಯಸ್ಸಿನವರೂ ಪಾಲ್ಗೂಂಡಿದ್ದರು. ಮೌಲ್ವಿಗಳು ನೆರೆದಿದ್ದವರಿಗೆ ಹಿತವಚನ ನುಡಿದರು. ಪ್ರತಿಯೊಬ್ಬರು ಹೊಸ ಹೊಸ ಉಡುಪುಗಳೊಂದಿಗೆ ಸುಗಂಧ ದ್ರವ್ಯ ಹಚ್ಚಿಕೊಂಡು ಎಲ್ಲರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿದರು.
ತ್ಯಾಗ ಬಲಿದಾನದ ಪ್ರತೀಕ ಹಬ್ಬ. ಬಕ್ರೀದ್ ಹಬ್ಬ ವಿಶ್ವದ ಕೋಟ್ಯಂತರ ಮುಸ್ಲಿಂರ ನೆಚ್ಚಿನ ಹಬ್ಬವಾಗಿದೆ. ಸಾಮೂಹಿಕ ಪ್ರಾರ್ಥನೆ ನಡೆಸಿ ವಾರ್ಷಿಕ ದುಡಿಮೆ ಇಂತಿಷ್ಟು ಹಣದಲ್ಲಿ ಎಲ್ಲ ಸಮುದಾಯದ ಕಡು ಬಡವರಿಗೆ ಅಕ್ಕಿ, ಬಟ್ಟೆ, ಹಣ ದಾನ ಮಾಡಿ ಸಾರ್ಥಕವಾಗಿದೆ. ನಾಡಿನ ರೈತರು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಕಾಲಕಾಲಕ್ಕೆ ಮಳೆಯಾಗುವಂತೆ ಅಲ್ಲಾಹ್‌ನಲ್ಲಿ ಪ್ರಾರ್ಥಿಸಿದೆವು ಎಂದು ಧರ್ಮಗುರು ನೆರೆದಿದ್ದವರಿಗೆ ವಿವರಿಸಿದರು.
ಇಲ್ಲಿನ ಮಿಲ್ಲರ ಪೇಟೆ, ಕೌಲಬಜಾರ್, ಹುಸೇನ್ ನಗರ, ಪ್ರಶಾಂತ ನಗರ ಸೇರಿದಂತೆ ವಿವಿಧಡೆ ಮಸೀದಿಗಳಲ್ಲಿ ಮುಸ್ಲಿಂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಿಹಿ ಹಾಗೂ ಮಾಂಸ ಆಹಾರವನ್ನು ಕುಟುಂಬದೊಂದಿಗೆ ಸೇವಿಸಿದರು. ಸಮೀಪದ ಪ್ರಸಿದ್ದ ಮಸೀದಿಗಳಿಗೆ ಕುಟುಂಬ ಸಮೇತ ತೆರಳಿ ಪ್ರಾರ್ಥಿಸಿದರು. ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಶಾಸಕ ನಾರಾಭರತರೆಡ್ಡಿ ಹಾಗೂ ರಾಜಕೀಯ ಮುಖಂಡರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.