ಬಳ್ಳಾರಿ : ಗಣಿನಾಡು ಜಿಲ್ಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲೊಂದಾದ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಮುಸಲ್ಮಾನರು ಶ್ರದ್ಧಾಭಕ್ತಿ, ಸಡಗರ, ಸಂಭ್ರಮದಿಂದ ಸೋಮವಾರ ಆಚರಿಸಿದರು.
ರಂಜಾನ್ ದಿನಗಳಲ್ಲಿ ಕಳೆದ 3೦ ದಿನಗಳಿಂದ ಉಪವಾಸ ವ್ರತಾಚರಿಸಿದ ಮುಸಲ್ಮಾನರು, ರಂಜಾನ್ ಹಬ್ಬದ ದಿನದಂದು ಬೆಳಗ್ಗೆಯೇ ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಗೆ ಬಂದು ಸಿಹಿ ತಿನಿಸು ಸೇವಿಸಿದರು. ನಂತರ ಹೊಸ ಉಡುಪುಗಳನ್ನು ಧರಿಸಿ, ಮಕ್ಕಳು, ಸಂಬಂಧಿಕರೊಂದಿಗೆ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಹಬ್ಬದ ಸಂದೇಶ ಸಾರಿದರು. ದಾನ, ಧರ್ಮದ ಮಹತ್ವದ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಸಾಮೂಹಿಕ ಪ್ರಾರ್ಥನೆ ಮುಗಿದ ಬಳಿಕ, ಎಲ್ಲರೂ, ಆಲಿಂಗಿಸಿಕೊಳ್ಳುವ ಮೂಲಕ ರಂಜಾನ್ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಇದಾದ ಬಳಿಕ, ಪಕ್ಕದಲ್ಲೇ ಇದ್ದ ಸ್ಮಶಾನಕ್ಕೆ (ಖಬರಸ್ತಾನ್) ತೆರಳಿ ಅಲ್ಲಿನ ಧರ್ಮಗುರು, ತಮ್ಮ ತಮ್ಮ ಹಿರಿಯರ ಸಮಾಧಿಗಳ ಮೇಲೆ ಪತ್ರಿಯನ್ನಿಟ್ಟು ನಮಸ್ಕರಿಸಿದರು. ಬಳಿಕ ಮನೆಗಳಿಗೆ ಬಂದು ಹಬ್ಬದೂಟ ಸವೆದು ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಶಾಸಕ, ಸಂಸದರು ಭಾಗಿ;
ರಂಜಾನ್ ಹಬ್ಬದ ನಿಮಿತ್ತ ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜ್ಯಸಭೆ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್, ಲೋಕಸಭೆ ಸದಸ್ಯ ಈ.ತುಕಾರಾಮ್, ನಗರ ಶಾಸಕ ನಾರಾ ಭರತ್‌ರೆಡ್ಡಿ ಭಾಗಿಯಾಗುವ ಗಮನ ಸೆಳೆದರು. ಪ್ರಾರ್ಥನೆ ಮುಗಿದ ಬಳಿಕ ಶಾಸಕ, ಸಂಸದರೆಲ್ಲರೂ ಧರ್ಮಗುರುಗಳಿಗೆ ಹಬ್ಬದ ಶುಭಾಶಯ ತಿಳಿಸಿದರು. ನಂತರ ಮೈದಾನದಲ್ಲಿದ್ದ ಮುಸಲ್ಮಾನರು, ಜನಪ್ರತಿನಿಧಿಗಳನ್ನು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಪಾನೀಯ ವಿತರಣೆ :
ರಂಜಾನ್ ಹಬ್ಬದ ನಿಮಿತ್ತ ನಗರದ ಬಂಡಿಮೋಟ್ ವೃತ್ತ ಸೇರಿ ಹಲವು ಕಡೆ ಪಾನೀಯಗಳನ್ನು ವಿತರಿಸಲಾಯಿತು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ವಾಪಸ್ ಮನೆಗೆ ತೆರಳುತ್ತಿದ್ದ ಮುಸಲ್ಮಾನರಿಗೆ ದಾನಿಗಳು ತಂಪು ಸಿಹಿ ಪಾನೀಯ, ಮಜ್ಜಿಗೆಯನ್ನು ವಿತರಿಸಿದರು.