ಜಯಂತಿ ಅರ್ಥಪೂರ್ಣ ಆಚರಿಸಿ

Published on

ಬಳ್ಳಾರಿ : ಜಿಲ್ಲಾಡಳಿತ ವತಿಯಿಂದ ಮಹನೀಯರ ಜಯಂತಿಯ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಹನೀಯರ ಜಯಂತಿ ಆಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿ.29 ರಂದು ಕುವೆಂಪು ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಮತ್ತು ಜ.01 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಜಯಂತಿಯ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದರು.

ಎಲ್ಲ ಸಮುದಾಯದವರು, ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು. ದಿನಾಚರಣೆ ದಿನದಂದು ಬೆಳಗ್ಗೆ 11 ಗಂಟೆಗೆ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಹಾಗೂ ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗೀನಗಾಯನ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಹನೀಯರ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಬೇಕು. ನಂತರದಲ್ಲಿ ಲಘು ಉಪಾಹಾರ ವ್ಯವಸ್ಥೆ ಕೈಗೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net