ಬಳ್ಳಾರಿ ; ರಾಜ್ಯ ಸರ್ಕಾರ ಜಾತಿ ಜನಗಣತಿ ವರದಿಯನ್ನು ಸರ್ಕಾರ ಕೂಡಲೇ ಚರ್ಚೆಗೆ ಮುಕ್ತಗೊಳಿಸಿ ಯಥಾಸ್ಥಿತಿಯಾಗಿ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವರದಿಯಲ್ಲಿ ನ್ಯೂನತೆಗಳಿದ್ದರೆ ವಿಶೇಷ ಅಧಿವೇಶನ ನಡೆಸಿ ಚರ್ಚೆಗೆ ಅವಕಾಶ ನೀಡಬೇಕು.ಅಲ್ಲದೆ, ಕೆಲವು ತಿದ್ದುಪಡಿಗಳಿದ್ದರೆ ಸರಿಪಡಿಸಬೇಕು. ಜಾತಿ ಜನಗಣತಿ ವರದಿಗಾಗಿ 165 ಕೋಟಿ ರೂ. ವ್ಯಯಿಸಲಾಗಿದೆ. ಹೀಗಾಗಿ ಇನ್ನೂ ವರದಿಯೆ ಬಿಡುಗಡೆಗೊಳಿಸದೆ ಅವೈಜ್ಞಾನಿಕವಾಗಿದೆ ಎಂದರೆ ಅನುದಾನ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸಲು ಸಾಧ್ಯವೇ? ಎಂಬಂತಹ ಜೊಳ್ಳು ಬೆದರಿಕೆಗೆ ತಲೆ ಕೆಡಿಸಿಕೊಳ್ಳದೆ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರ ಜಾತಿ ಜನಗಣತಿ ಆಧಾರದಲ್ಲಿ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈಗ ರಾಜ್ಯದ ಸುಮಾರು ಆರೂವರೆ ಕೋಟಿ ಜನಸಂಖ್ಯೆಯ ಅಧ್ಯಯನವಾಗಿರುವುದರಿಂದ ಜಾತಿ ಜನಗಣತಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ಆಗಲಿದೆ. ಹಾಗಾಗಿ ಎಲ್ಲ ಜಾತಿಗಳ ಜನರು ಕೂಡ ಜಾತಿ ಜನಗಣತಿ ವರದಿ ಬಿಡುಗಡೆಯ ಪರ ನಿಲುವು ತಾಳಬೇಕು. ಕಾಂತರಾಜು ಅವರ ವರದಿ ಜಾರಿಗೆ ಬಂದು ಬಿಟ್ಟರೆ ಲಿಂಗಾಯತ, ಒಕ್ಕಲಿಗ ಮತ್ತಿತರ ಮೇಲವರ್ಗಗಳ ರಾಜಕೀಯ ಮತ್ತಿತರ ಪ್ರಾತಿನಿಧ್ಯ ತಪ್ಪಿ ಹೋಗುತ್ತದೆ ಎಂಬ ಭಯ ಆಯಾ ಸಮುದಾಯಗಳಲ್ಲಿ ಹುಟ್ಟು ಹಾಕಲಾಗುತ್ತಿದೆ. ಆದರೆ ವರದಿಯ ಅಂಶಗಳು ಬಿಡುಗಡೆಯಾಗಿ ಮೇಲವರ್ಗಗಳಿಗೆ ಅನ್ಯಾಯ ಆಗುತ್ತದೆಂಬ ವಾದದಲ್ಲಿ ಹುರುಳಿಲ್ಲ ಎಂದರು.
ಒಕ್ಕೂಟದ ಸದಸ್ಯರಾದ ಶಿವಶಂಕರ, ಎರ‌್ರಿಸ್ವಾಮಿ, ಎ.ಮಾನಯ್ಯ, ಸಂಗನಕಲ್ಲು ವಿಜಯಕುಮಾರ, ಮೊಹಮ್ಮದ್ ರಫೀಕ, ಬಿ.ಎಂ.ಪಾಟೀಲ್ ಇದ್ದರು.
===