ಬಳ್ಳಾರಿ : ಬುಡಕಟ್ಟು ಜನರ ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಆದಿ ಕರ್ಮಯೋಗಿ ಅಭಿಯಾನ ಸಹಕಾರಿ ಎಂದು ನವದೆಹಲಿಯ ಕೇಂದ್ರ ಬುಡಕಟ್ಟು ಮಂತ್ರಾಲಯ ಅಧೀನ ಕಾರ್ಯದರ್ಶಿ ಆಶಿಶ್ ಕುಮಾರ್ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಕೇಂದ್ರ ಸರ್ಕಾರದ ಆದಿ ಕರ್ಮಯೋಗಿ ಅಭಿಯಾನ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಲೂಕುಮಟ್ಟದ ತರಬೇತುದಾರರಿಗೆ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಐದು ತಾಲೂಕಗಳಿಂದ ಒಟ್ಟು 59 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.
ಆಯ್ಕೆಯಾದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿವ ನೀರು, ಆರೋಗ್ಯ, ದೂರವಾಣಿ ಸಂಪರ್ಕ, ವಿದ್ಯುತ್, ವಸತಿ ನಿರ್ಮಾಣ, ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಆರೋಗ್ಯ ಕಾರ್ಡ್, ಜಾತಿ ಪ್ರಮಾಣ ಪತ್ರ, ಅರಣ್ಯ ಹಕ್ಕು ಯೋಜನೆಯಡಿ ಅರ್ಹರಿಗೆ ಹಕ್ಕು ಪತ್ರ ಒದಗಿಸಲಾಗುವುದು. ಅಧಿಕಾರಿಗಳು ಪೂರಕ ತರಬೇತಿ ಹೊಂದಿ ಸೌಲಭ್ಯ ಅನುಷ್ಠಾನ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು ಮಾತನಾಡಿ, ಆಯ್ಕೆಯಾದ ಗ್ರಾಮಗಳಲ್ಲಿ ಅಭಿವೃದ್ಧಿಪಡಿಸಿ ಪರಿಶಿಷ್ಟ ವರ್ಗದ ಜನರ ಶ್ರೇಯೋಭಿವೃದ್ಧಿ ಕೈಗೊಳ್ಳುವುದು ಅಭಿಯಾನದ ಉದ್ದೇಶವಾಗಿದೆ. ಜಿಲ್ಲಾಮಟ್ಟದ ಮಾಸ್ಟರ್ ತರಬೇತುದಾರರಿಗೆ ರಾಜ್ಯ ಮಟ್ಟದಲ್ಲಿ ಈಗಾಗಲೇ ತರಬೇತಿ ನೀಡಲಾಗಿದೆ. ಈಗ ತಾಲೂಕು ಮಟ್ಟದ ತರಬೇತುದಾರರಿಗೆ ನೀಡಲಾಗುತ್ತಿದ್ದು, ಇದರ ಸದುಪಯೋಗವಾಗಬೇಕು ಎಂದು ತಿಳಿಸಿದರು.