ಬಳ್ಳಾರಿ ; ಕನ್ನಡ ಸಾಹಿತ್ಯ ಪರಿಷತ್ ಬೈಲಾದ ಕೆಲ ನಿಬಂಧನೆಗಳಲ್ಲಿ ಅಸ್ಪಷ್ಟತೆಯಿಂದ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ನಗರದ ಪತ್ರಿಕಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರ ಬೆಂಬಲದಿಂದ ಕೆಲ ನಿಬಂಧನೆಗಳ ತಿದ್ದುಪಡಿ ಬಗ್ಗೆ ತಿರ್ಮಾನಿಸಲಾಗುವುದು. ಕಸಾಪದಿಂದ ವಾರ್ಷಿಕ ಸಭೆಗಳು ನಡೆಯದೆ ಹಾಗೂ ಕೆಲ ಸಾಹಿತಿಗಳ ಆರೋಪಗಳು ತನಿಖೆ ಬಳಿಕ ಸಾಬೀತದಾರೆ ಕಾನೂನತ್ಮಕವಾಗಿ ಕಸಾಪಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಿಸಲಿ ಎಂದು ತಿರುಗೇಟು ನೀಡಿದರು.
ಈ ಹಿಂದೆ ಹಂಪನಾಗರಾಜಯ್ಯ ಕಸಾಪದ ಅಧ್ಯಕ್ಷರಾಗಿದ್ದ ವೇಳೆ ಚುನಾವಣೆ ಅಕ್ರಮ ಹಾಗೂ ದುರಾಡಳಿತ ಆರೋಪ ಹೊತ್ತಿದ್ದರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಚುನಾಯಿತ ಅಧ್ಯಕ್ಷನಾಗಿದ್ದು, ಸಾವಿರಾರು ಸಾಹಿತಿಗಳಿಂದ ಆಯ್ಕೆಯಾಗಿರುವೆ. ನನ್ನದೇ ಅದ ಜವಾಬ್ದಾರಿಯಿದ್ದು ಕೆಲ ಸಾಹಿತಿಗಳು ದುರುದ್ದೇಶ ಕೂಡಿದ ಆರೋಪಗಳಿಂದ ಕಸಾಪದ ಚಾರಿತ್ರೃಕ ವಧೆಯಾಗಿದೆ ಎಂದು ಗುಡುಗಿದರು.
ಹಾವೇರಿ ಸಮ್ಮೇಳನದ ವೆಚ್ಚದ ವರದಿ ಕಳೆದ ವಾರವೇ ಬಂದಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾಹಿತಿ ನೀಡಲಾಗುವುದು. ಮಂಡ್ಯದ ಸಮ್ಮೇಳನದ ಲೆಕ್ಕ ಪರಿಶೋಧನ ವರದಿಯೂ ಇನ್ನೂ ವಿಳಂಬವಾಗಲಿದೆ. ಸಮ್ಮೇಳನದ ಸಂಪೂರ್ಣ ಆರ್ಥಿಕ ವೆಚ್ಚದ ಜವಾಬ್ದಾರಿ ಕೋಶಾಧ್ಯಕ್ಷರು ಹೊಂದಿರುತ್ತಾರೆ ಎಂದರು.
ಈಚೆಗೆ ನಟ ಕಮಲ್‌ಹಾಸನ್ ಹೇಳಿಕೆ ವಿರೋಧಿಸಿ ಕಸಾಪ ಸುಪ್ರಿಂ ಕೋರ್ಟ್ ಮೊರೆ ಹೋಗಿ ಕನ್ನಡದ ಆಸ್ಮಿತೆ ಉಳಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿಯೇ ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ್ದವು. ಆದರೆ, ಈಚೆಗೆ ಸರ್ಕಾರ ಕಸಾಪ ಅಧ್ಯಕ್ಷರಿಗೆ ನೀಡಿದ್ದ ಸಚಿವ ಸ್ಥಾನಮಾನ ಹಿಂಪಡೆದಿರುವುದು ಅಸಮಾಧಾನ ತಂದಿದೆ ಎಂದು ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಜಯನಗರ ಜಿಲ್ಲೆಯ ಸಹಕಾರ ಅಗತ್ಯವಿದೆ. ಕಾರ್ಯಕ್ರಮಕ್ಕೆ ಗಡಿಭಾಗದಿಂದ ಅಪಾರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿದೆ. ಕೆಲವೊಂದು ಸಣ್ಣಪುಟ್ಟ ದೋಷಗಳು ಕಂಡುಬರುವುದು ಸಾಮಾನ್ಯ ಅದನ್ನು ಮೆಟ್ಟಿನಿಲ್ಲುವ ಕೆಲಸ ಕಸಾಪ ಮಾಡಲಿದೆ. ಸಾಹಿತಿಗಳ ಬೇಡಿಕೆಗಳು ಸಕಾರತ್ಮಕವಾಗಿದ್ದರೆ ಸ್ಪಂದಿಸಲಾಗುವುದು ಎಂದು ಹೇಳಿದರು.
ವಿವಿಧ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ, ವಿವೇಕಾನಂದಗೌಡ ಪಾಟೀಲ, ಲಿಂಗಯ್ಯ ಬಿ.ಹಿರೇಮಠ, ವಿಜಯಕುಮಾರ ಪಾಟೀಲ, ರಂಗಣ್ಣ ಪಾಟೀಲ ಅಳ್ಳುಂಡಿ, ಶರಣೇಗೌಡ ಪೊಲೀಸ್ ಪಾಟೀಲ ಇದ್ದರು.