ಬಳ್ಳಾರಿ : ರಕ್ತದಾನದಿಂದ ಹಲವಾರು ರೀತಿಯ ಪ್ರಯೋಜನಗಳಿದ್ದು, ಅದರಲ್ಲಿ ಹೊಸ ರಕ್ತದ ಉತ್ಪತ್ತಿ ಆಗುವುದರ ಜತೆಗೆ ರಕ್ತ ಚಲನೆಯ ಕಾರ್ಯತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ನೂತನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಮಿನೇರಾ ಸ್ಟೀಲ್ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಅಪಘಾತ, ತುರ್ತು ಶಸ್ತಚಿಕಿತ್ಸೆಗಳ ಸಂದರ್ಭದಲ್ಲಿ ಜೀವ ಉಳಿಸಲು ರಕ್ತ ಅವಶ್ಯಕವಾಗಿದ್ದು, ಆರೋಗ್ಯವಂತರು ತಪ್ಪದೇ ರಕ್ತದಾನ ಮಾಡಬೇಕು. ಈಚೆಗೆ ಜೆಎಸ್‌ಡಬ್ಲೂನಲ್ಲಿ 5000 ಯುನಿಟ್ ರಕ್ತ ಶೇಖರಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲೆಯಾಗಿದೆ. ಮುಂಬರುವ ದಿನಗಳಲ್ಲಿಯೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ರಕ್ತದಾನವು ಒಂದು ಮಹಾದಾನ. ರಕ್ತದಾನ ಶಿಬಿರಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೋಬ್ಬರ ಆರೋಗ್ಯವನ್ನೂ ಸಹ ಉಳಿಸಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ಈ ಶಿಬಿರದಲ್ಲಿ 1500 ಯುನಿಟ್ ರಕ್ತ ಸಂಗ್ರಹಣೆ ಗುರಿ ಹೊಂದಲಾಗಿದೆ. ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರಿಯರಿಗೆ, ಶಸ್ತಚಿಕಿತ್ಸಾ ಹೆರಿಗೆ ವೇಳೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಜೀವ ಉಳಿಸಲು ರಕ್ತ ಸಹಕಾರಿ ಆಗುತ್ತದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಜೀವ ಉಳಿಸುವ ಪುಣ್ಯದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಬಳಿಕ ಡಿಸಿ ಪ್ರಶಾಂತ ಕುಮಾರ ಮಿಶ್ರಾ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಬಳಿಕ ಪ್ರಮಾಣ ಪತ್ರ ನೀಡಲಾಯಿತು. ಈ ವೇಳೆ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ಆಶಾ ಕಾರ್ಯಕರ್ತೆ ಪರಿಮಳ, ವಂಶಿ ಕಲ್ಯಾಣಿ ರೆಡ್ಡಿ, ಮಂಜುನಾಥ, ಲೋಕೇಶ್ ಅವರಿಗೆ ಸನ್ಮಾನ ಮಾಡಲಾಯಿತು.