ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳದಿರಲಿ; ಸಾರಿಗೆ ಸಚಿವ ಬಿ.ಶ್ರೀರಾಮುಲು ಮನವಿ

12092022 bellary bjp st meeting
Published on

ಬಳ್ಳಾರಿ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದು ಸಮುದಾಯದ ಒತ್ತಡ. ನಮ್ಮ ಆಗ್ರಹ ಕೂಡ ಇದೇ ಆಗಿದೆ. ತಾಂತ್ರಿಕ ಸಮಸ್ಯೆಗಳು ಇರುವ ಕಾರಣ ಮೀಸಲಾತಿ ಘೋಷಣೆ ತಡವಾಗುತ್ತಿದೆ. ನಾವು ಯಾರೂ ಕೂಡ ತಾಳ್ಮೆ ಕಳೆದುಕೊಳ್ಳುವುದು ಬೇಡ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಪಕ್ಷದಿಂದ ನಗರದಲ್ಲಿ ಸೆ.23ರಂದು ‘ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಸಮಾವೇಶ’ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪಕ್ಷದ ಬಗ್ಗೆ ನಾವ್ಯಾರು ನಕರಾತ್ಮಕವಾಗಿ ಮಾತನಾಡಬಾರದು. ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಸಮುದಾಯಕ್ಕಾಗಿ ಒಂದು ಸಚಿವಾಲಯ ಮಾಡಿದ್ದಾರೆ. ಮೀಸಲಾತಿ ಸಿಗಬೇಕಿದೆ ಎನ್ನುವುದು ನಮ್ಮ ಒತ್ತಡ ಇದೆ. ಬರುವ ದಿನಗಳಲ್ಲಿ ಅದೂ ಆಗಲಿದೆ. ಪಕ್ಷ ನಮಗೆ ಮಾತು ಕೊಟ್ಟಿದೆ. ಅದನ್ನು ಉಳಿಸಿಕೊಳ್ಳುತ್ತದೆ ಎಂದರು.

ಸಮಾವೇಶದ ವೇಳೆ ಸರ್ಕಾರ ಸಿಹಿ ಸುದ್ದಿ ನೀಡುವ ನಿರೀಕ್ಷೆ ಇದೆ. ಬಳ್ಳಾರಿಯಲ್ಲಿ ಸಮಾವೇಶ ನಡೆಸುವುದರಿಂದ ಸಮುದಾಯಕ್ಕೆ ಹೆಚ್ಚು ಶಕ್ತಿ ಸಿಗಲಿದೆ. ಯಾರು ಏನೇ ಕೊಂಕು ಮಾತನಾಡಿದರೂ ತಲೆಕೆಡಿಸಿಕೊಳ್ಳದೆ ಸಮಾವೇಶ ಯಶಸ್ವಿಗೊಳಿಸೋಣ. ಸಮಾವೇಶದಿಂದ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ಕೊಡೋಣ ಎಂದರು.

ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಎನ್.ವೈ.ಗೋಪಾಲಕೃಷ್ಣ, ಬಸವರಾಜ ದಢೇಸುಗೂರು, ಪರಣ್ಣ ಮುನವಳ್ಳಿ, ಮುಖಂಡರಾದ ಗುರುಲಿಂಗನಗೌಡ, ದಿವಾಕರ, ಶಿವನಗೌಡ ನಾಯಕ್, ಎಸ್.ವಿ.ರಾಮಚಂದ್ರ, ಹೇಮಲತಾ ನಾಯಕ್, ಮಾಜಿ ಶಾಸಕರಾದ ಚಂದ್ರನಾಯ್ಕ, ಪ್ರತಾಪಗೌಡ ಪಾಟೀಲ್, ನೇಮಿರಾಜ ನಾಯ್ಕ, ಟಿ.ಎಚ್.ಸುರೇಶಬಾಬು, ಮಾಜಿ ಸಂಸದೆ ಜೆ.ಶಾಂತಾ, ಮಾಜಿ ವಿಪ ಸದಸ್ಯ ಸಿದ್ಧರಾಜು, ವಿಭಾಗ ಪ್ರಭಾರ ಸಿದ್ದೇಶ ಯಾದವ, ಸಹ ಪ್ರಭಾರ ಚಂದ್ರಶೇಖರ್ ಹಲಿಗೇರಿ, ಪೂಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಮುರಹರಿಗೌಡ, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಇತರರಿದ್ದರು.

ನಾವು ಹಕ್ಕ-ಬುಕ್ಕರಿದ್ದಂತೆ
ಸಭೆಯಲ್ಲಿ ಮಾತನಾಡಿದ ಸಚಿವ ಆನಂದಸಿಂಗ್, ಬರುವ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳನ್ನು ಗೆಲ್ಲುವಂತೆ ಮಾಡಲು ಹಕ್ಕರಾಯನಂತಿರುವ ಶ್ರೀರಾಮುಲು ಮತ್ತು ಬುಕ್ಕರಾಯನಂತಿರುವ ನಾನು ಮಾಡುತ್ತೇವೆ. ಬರುವ ಚುನಾವಣೆ ನಮಗೆ ಚದುರಂಗ ಆಟದಂತೆ. ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಕಟ್ಟಿದಂತೆ ನಾವೂ ಚುನಾವಣೆ ಎದುರಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಯೋಜನೆ ನಮ್ಮ ಮುಂದೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net