

ಬಳ್ಳಾರಿ: ದೇಶದ ಸ್ವಾತಂತ್ರೃ ಹೋರಾಟದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ತೊಡಗಿಸಿಕೊಂಡಿದ್ದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ್ದರಾದರೂ ವಾಸ್ತದಲ್ಲಿ ಅದು ಜಾರಿಯಾಗಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಗ್ಗುಬಾಟಿ ಪುರಂದೇಶ್ವರಿ ಕಳವಳ ವ್ಯಕ್ತಪಡಿಸಿದರು.
ನಗರದ ಬಸವಭವನದಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಎಲ್ಲಿ ಮಹಿಳೆಯರು ಸುಭಿಕ್ಷೆಯಿಂದ ಇದ್ದಾರೋ ಆ ದೇಶ ಅಭಿವೃದ್ಧಿಯಾಗಲಿದೆ. ದೇಶದ ಅಭಿವೃದ್ಧಿ ನೋಡಬೇಕಾದರೆ ಮೊದಲು ಅಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ನೋಡಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿಯೇ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದಾರೆ. ಆದರೆ, ಈಗಲೂ ಸ್ತ್ರೀಯರು ಅಡುಗೆ ಮನೆಗೆ ಸೀಮಿತವಾಗಿದ್ದಾರೆ. ವಾಕ್‌ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯವಿಲ್ಲ. ಗರ್ಭಿಣಿಯಿದ್ದಾಗಲೇ ಹೆಣ್ಣು ಎಂದಾಕ್ಷಣ ಗರ್ಭಪಾತ ಮಾಡಿಸಲಾಗುತ್ತಿದೆ. ಒಂದು ರೀತಿಯಲ್ಲಿ ಮಹಿಳೆಯರದ್ದು ಮೌನ ಪ್ರತಿಭಟನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಹಿಂದೆ ಸಾವಿರ ಪುರುಷರಿಗೆ 896 ಇದ್ದ ಮಹಿಳೆಯರ ಸಂಖ್ಯೆ ಇದೀಗ 900 ಗಡಿ ದಾಟಿದೆ. ಗಂಡ ನೀಡಿದ್ದ ಹಣವನ್ನು ಅಡುಗೆ ಮನೆಯ ಡಬ್ಬಿಗಳಲ್ಲಿ ಬಚ್ಚಿಡುತ್ತಿದ್ದ ಮಹಿಳೆಯರ ಅನುಕೂಲಕ್ಕಾಗಿ ‘ಜನ್‌ಧನ್’ ಯೋಜನೆ ಜಾರಿಗೆ ತಂದು ಎಲ್ಲರಿಗೂ ಠೇವಣಿರಹಿತ ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟರು. ಪರಿಣಾಮ ದೇಶದ 44 ಕೋಟಿ ಜನ್‌ಧನ್ ಖಾತೆಗಳ ಪೈಕಿ ಶೇ.70 ಮಹಿಳೆಯರದ್ದಾಗಿವೆ ಎಂದು ತಿಳಿಸಿದರು.
ಮುದ್ರಾ ಯೋಜನೆ ಮೂಲಕ ಸಣ್ಣ ಉದ್ಯಮಿಗಳಿಗೆ 50 ಸಾವಿರದಿಂದ 5 ಲಕ್ಷ ರೂ. ವರೆಗೆ ಯಾವುದೇ ಭದ್ರತೆಯಿಲ್ಲದೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಶೇ.80 ಮಹಿಳೆಯರು ಸಾಲ ಸೌಲಭ್ಯ ಪಡೆದಿದ್ದಾರೆ. ಗ್ಯಾಸ್ ಸಬ್ಸಿಡಿ ತ್ಯಜಿಸಿದ್ದ ದೇಶದ 8 ಕೋಟಿ ಜನರಿಗೆ ಉಚಿತ ಗ್ಯಾಸ್ ಸೌಲಭ್ಯ ಕಲ್ಪಿಸಲಾಗಿದೆ. ಪುಲ್ವಾಮಾ ದಾಳಿ ನಡೆಸಿ ಮೆರೆದಿದ್ದ ಪಾಕಿಸ್ತಾನಕ್ಕೆ ಬಾಲಾಕೋಟ್ ದಾಳಿ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಮಹಿಳೆಯರು ಈ ಎಲ್ಲ ವಿಷಯಗಳು, ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಕೋರಿದರು.
ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ.ಸುಗುಣಾ ಮಾತನಾಡಿದರು. ಮಹಿಳಾ ಮುಖಂಡರು, ಪಾಲಿಕೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.