ಗಾಂಧಿಯವರನ್ನು ಕೊಂದ ಗೋಡ್ಸೆ, ಸಾವರ್ಕರ್ ಹಾಗೂ ಗೋಳ್ವಾಲ್ಕರ್ ಅವರಾಗಲಿ ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಸಂಡೂರಿನ ಮೆಟ್ರಿಕಿ, ವಿಠಲಾಪುರ, ಡಿ.ಅಂತಾಪುರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಆರ್‌ಎಸ್‌ಎಸ್ ಸಂಘ ಪರಿವಾರದ ಯಾರೊಬ್ಬರೂ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದೂ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು. ಕೋವಿಡ್ ವೇಳೆ ಮೃತದೇಹಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ ಬಿಜೆಪಿಯ ನಾಯಕರನ್ನು ಯಾವ ದೇವರು ಕ್ಷಮಿಸಲ್ಲ. ಬಿಜೆಪಿ ಅಧಿಕಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೇರಿ ಚೀನಾದಿಂದ ಪಿಪಿಎ ಕಿಟ್ ತರಿಸಿ ಭ್ರಷ್ಟಚಾರ ನಡೆಸಿದ್ದಾರೆ ಎಂಬುದಾಗಿ ನ್ಯಾ.ಮೈಕೆಲ್ ಕುನ್ಹಾ ಆಯೋಗ ಪತ್ತೆ ಹಚ್ಚಿದೆ ಎಂದರು. ಈ ಹಿಂದೆ ಮಾಜಿ ಸಚಿವ ಜನಾರ್ದನರೆಡ್ಡಿ ಟೀಮ್ ನಡೆಸಿದ್ದ ಭ್ರಷ್ಟಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆ ಬಯಲಿಗೆ ಎಳೆದಿದ್ದರು. ಬಿಜೆಪಿ ಅಧಿಕಾರಕ್ಕೆ ಬರುವುದೆ ಲೂಟಿ ಒಡೆಯುವುದಕ್ಕೆ ಎಂದು ಕುಟುಕಿದರು. ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದ ರೆಡ್ಡಿ ಮತ ಕೇಳುವ ನೈತಿಕತೆ ಇಲ್ಲ ಎಂದು ದೂರಿದರು. ರೆಡ್ಡಿ ಜೂಜಾಬಿ ರಾಜಕಾರಣಿ. ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದೀರಿ ? ನಿಮ್ಮ ಅಟ್ಟಹಾಸ ಮುರಿದಿದ್ದು ಹಾಗೂ ಜಿಲ್ಲೆಯ ಜನತೆಯನ್ನು ಭಯಮುಕ್ತಗೊಳಿಸಿದ್ದು ಸಿದ್ದರಾಮಯ್ಯ ಎಂಬದನ್ನು ಮರಿಯಬೇಡಿ ಎಂದು ಎಚ್ಚರಿಕೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿಗೆ ಪ್ರಚಾರಕ್ಕೆ ಬರಲು ಆಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸರಿಯಾಗಿ ಪ್ರಚಾರ ಮಾಡದೆ ಇದ್ದರಿಂದ ಗೆದ್ದಿದ್ದಿರಿ.ರಾಜಕೀಯ ಜೀವನದಲ್ಲಿ ಯಾರ ಗೆಲವು ಶಾಶ್ವತ ಅಲ್ಲ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ರೆಡ್ಡಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಸರ್ಕಾರ ನೀಡಿದ ಕಲ್ಯಾಣ ಕಾರ್ಯಕ್ರಮಗಳು ಕ್ಷೇತ್ರದ ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ ಎಂದು ವ್ಯಂಗ್ಯವಾಡಿದರು.
ಬಾಕ್ಸ್ : ಕೊರೊನಾ ಅಕ್ರಮಕ್ಕೆ ಸಂಬಂಧಿಸಿದ ನ್ಯಾ.ಮೈಕೆಲ್ ಕುನ್ಹಾ ಆಯೋಗ ವರದಿ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಸೋರಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂಡೂರಿನ ಜಿಂದಾಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅಧಿಕೃತವಾಗಿ ವರದಿ ಇನ್ನೂ ಕೈ ಸೇರಿಲ್ಲ. ಸೇರಿದ ಬಳಿಕ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು.ವಿರೋಧ ಪಕ್ಷದ ನಾಯಕನಾಗಿದ್ದಲೇ ಕೋವಿಡ್‌ನಲ್ಲಿ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬುದಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಯೋಗ ರಚಿಸಲಾಗಿದೆ. ಇದರಲ್ಲಿ ಯಾವುದೆ ರಾಜಕೀಯ ದುರದ್ದೇಶ ಕೂಡಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ಈ ವರದಿ ಕಾಂಗ್ರೆಸ್ ನಾಯಕರು ನೀಡಿಲ್ಲ , ನಿವೃತ್ತ ನ್ಯಾಯಾಧೀಶರು ನೀಡಿದ್ದಾರೆ. ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ ? ಈಗ ಯಡಿಯೂರಪ್ಪ ಮೇಲೆ ಫೋಕ್ಸೋ ಪ್ರಕರಣದಲ್ಲಿ ಚಾಜ್ ಶೀಟ್ ಹಾಕಿರುವುದು ಸುಳ್ಳಾ?. ವಾಲ್ಮೀಕಿ ಹಗರಣದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ, ನಿಗಮಕ್ಕೆ ಹಣ ಮರುಪಾವತಿಯಾಗಿದೆ. ಮುಡಾ ಬೋಗಸ್ ಪ್ರಕರಣ ಬಿಜೆಪಿಯವರು ಸುಮ್ಮನೆ ಆರೋಪ ಮಾಡಿದ್ದಾರೆ. ವಕ್ಫ್ ಆಸ್ತಿ ಒತ್ತುವರಿಯಾಗಿದ್ದರೆ ವಶಪಡಿಸಿಕೊಂಡು ಆಸ್ತಿ ಒಪ್ಪಿಸುವುದಾಗಿ ಬಿಜೆಪಿಯೇ ಪ್ರಣಾಳಿಕೆ ಹೊರಡಿಸಿತ್ತು. ಈಗ ಒತ್ತುವರಿಯಾದವರಿಗೆ ನೋಟಿಸ್ ಹೋದರೆ ತಪ್ಪ ?. ಸದ್ಯ ವಕ್ಪ್ ನಿಂದ ನೀಡಿರುವ ನೋಟೀಸ್‌ಗಳನ್ನು ವಾಪಾಸ್ ಪಡೆಯಲಾಗಿದೆ. ಇದರ ಬಗ್ಗೆ ಪರಾಮರ್ಶೆ ಮಾಡಲಾಗುವುದು ಎಂದರು. ಮಾಜಿ ಸಚಿವ ಜನಾರ್ದನರೆಡ್ಡಿ ಅಕ್ರಮದಿಂದ ಗಣಿಕಾರಿಕೆ ಮಾಡಿ ಜೈಲು ಸೇರಿ ಹೊರ ಬಂದಿರುವ ಒಬ್ಬ ಕ್ರಿಮಿನಲ್ ಎಂದು ಕಿಡಿಕಾರಿದರು. ಯಡಿಯೂರಪ್ಪ ಸಿಎಂ ಹಾಗೂ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿದ್ದು ಹಣ ಕೊಟ್ಟು ಎಂಬುದಾಗಿ ಪಕ್ಷದ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ ಎಂದರು. ಗೃಹಲಕ್ಷ್ಮೀ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲುಪತ್ತಿದೆ ಮಾಜಿ ಪ್ರಧಾನಿ ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ನಾಗೇಂದ್ರ ಅವರಿಗೆ ಉಪ ಚುನಾವಣೆಯ ಬಳಿಕ ಸಚಿವ ಸ್ಥಾನ ಕೊಡುವುದರ ಬಗ್ಗೆ ಚರ್ಚಿಸಲಾಗುವುದು ಎಂದರು.