ಬಿಜೆಪಿ ಅಭ್ಯರ್ಥಿ ಗೆಲವು ಖಚಿತ

Published on

ಬಳ್ಳಾರಿ : ಸಂಡೂರಿನ ಉಪಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕ ಬೈರತಿ ಬಸವರಾಜ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳಿಂದ ತುಂಬಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ಹಣವನ್ನು ಜಿಲ್ಲೆಯ ಜನರಿಗೆ ಹಂಚಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಿಂದ ಯಾವುದೇ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂಬುದು ಜನರಿಗೆ ತಿಳಿದಿದೆ. ಸಂಡೂರು ಕ್ಷೇತ್ರದಲ್ಲಿ ಸಂಸದ ಈ.ತುಕಾರಾಮ್ ಅವರು ನಾಲ್ಕು ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಆದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಜತೆಗೆ ಈಗಾಗಲೇ ಸಂಸದ ಇರುವವರ ಮನೆಯಲ್ಲಿಯೇ ಟಿಕೆಟ್ ನೀಡಿರುವುದು ಕ್ಷೇತ್ರದ ಜನರಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ ಈ ಬಾರಿ ಕ್ಷೇತ್ರದ ಜನರು ಬಿಜೆಪಿಗೆ ಅವಕಾಶ ನೀಡಬೇಕು ಎಂದು ತೀರ್ಮಾನ ಮಾಡಿದ್ದು, ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಲವು ಕಾರಣಗಳಿಂದ ಪಕ್ಷದಿಂದ ದೂರ ಆಗಿದ್ದಾರೆ. ಮರಳಿ ಪಕ್ಷಕ್ಕೆ ಬಂದರೆ ನಮಗೆನೂ ಸಮಸ್ಯೆ ಇಲ್ಲ. ಸಿಗಬೇಕಾದ ಗೌರವ ಸಿಗುತ್ತದೆ ಎಂದರು. ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಕುಮಾರ ಮೋಕ, ಕಾರ್ಯದರ್ಶಿ ಕೆ.ಆರ್.ಮಲ್ಲೇಶ ಕುಮಾರ್, ಬುಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ, ಬಿಜೆಪಿ ಮುಖಂಡರಾದ ರಾಮಲಿಂಗಪ್ಪ, ಅಯ್ಯಳ್ಳಿ ತಿಮ್ಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net