ಬಳ್ಳಾರಿ : ವಿದ್ಯಾರ್ಥಿಗಳು ವರ್ತಮಾನಕ್ಕನುಗುಣವಾಗಿ ಹೊಸ ಕಲಿಕೆಗೆ ಮುಕ್ತವಾಗಿ ತೆರೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಜಿ. ಶೋಭಾ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಪದವಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯೋಗ ವಲಯದಲ್ಲಿ ಇಂದು ವಿಫುಲವಾದ ಅವಕಾಶಗಳಿವೆ. ಅಧ್ಯಯನ, ಉತ್ತಮ ಗುರಿ, ಸಾಧನೆ, ಆತ್ಮಸ್ಥೈರ್ಯ, ಕ್ರೀಯಾಶೀಲ ಮನೋಭಾವದೊಂದಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಬಿಕಾಂ ಲಾಜಿಸ್ಟಿಕ್ಸ್ ಆಪರೇಷನ್ಸ್, ಅಕೌಂಟಿಂಗ್ ಅಂಡ್ ಫೈನಾನ್ಸ್ ಕೋರ್ಸುಗಳು ಕರ್ನಾಟಕದ ಕೆಲವೇ ಕಾಲೇಜುಗಳಲ್ಲಿರುವಂತೆ ನಿಮ್ಮಲ್ಲೂ ಈಗ ಆರಂಭವಾಗಿರುವುದು ನಿಮ್ಮ ಸುದೈವ. ಗುಣಮಟ್ಟದ ಶಿಕ್ಷಣವನ್ನು ಕೊಡಲು ಅದನ್ನು ಬಲಪಡಿಸಲು ಇಲಾಖೆ ಯಾವತ್ತಿಗೂ ಜತೆಗಿರುತ್ತದೆ ಎಂದು ಭರವಸೆ ನೀಡಿದರು. ಎರಡು ವರ್ಷಗಳ ಕಾಲ ಈ ಕೋರ್ಸಿನಲ್ಲಿ ಮುಂದುವರೆದು ನಂತರ ಒಂದು ವರ್ಷ ವೃತ್ತಿ ತರಬೇತಿಯನ್ನು ಪಡೆಯಬಹುದು. ಆಗ ಸಂಭಾವನೆ ಕೂಡ ಸಿಗುತ್ತದೆ ಎಂದು ವೃತ್ತಿ ಮಾರ್ಗದರ್ಶನವನ್ನು ಮಾಡಿದರು.
ಬಿಡಿಸಿಸಿ ಸಂಸ್ಥೆಯ ಅಧ್ಯಕ್ಷ ಯಶವಂತ ರಾಜ ನಾಗಿರೆಡ್ಡಿ ಮಾತನಾಡಿ, ಇಂತಹ ಕೋರ್ಸುಗಳು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆಯನ್ನು ಹುಮ್ಮಸ್ಸನ್ನು ತುಂಬುತ್ತವೆ ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಮೋನಿಕ ರಂಜನ ಮಾತನಾಡಿದರು.