ಬಳ್ಳಾರಿ : ಪ್ರಸ್ತಕ ಸಾಲಿನಲ್ಲಿ ಜಿಲ್ಲಾದ್ಯಂತ ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಕಟ್ಟೆಚ್ಚರ ವಹಿಸಬೇಕು ಎಂದು ಡಿಐಜಿ ವರ್ತಿಕ ಕಟಿಯಾರ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದರು. ಗಣೇಶ ಪ್ರತಿಷ್ಠಾಪನೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಇಲಾಖೆಗಳಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ. ಒಂದು ವೇಳೆ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ, ಪ್ರಚೋದನಕಾರಿ ಸಂದೇಶ, ಚಿತ್ರ ಮತ್ತು ವಿಡಿಯೋಗಳ ಬಗ್ಗೆ ಗಮನಹರಿಸಿ ಅಂತಹ ಕಂಡುಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ಇತರೇ ಧರ್ಮದ ಧಾರ್ಮಿಕ ಕೇಂದ್ರಗಳ ಮುಂದೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸದಂತೆ ಸೂಚಿಸಬೇಕು. ಮೆರವಣಿಗೆಯಲ್ಲಿ ವಿಡಿಯೋ ಕವರೇಜ್ ಮಾಡಬೇಕು. ಸಿಬ್ಬಂದಿ ಸಮವಸ್ತ್ರದಲ್ಲಿದ್ದು, ಸಾರ್ವಜನಿಕವಾಗಿ ಕಾಣಿಸುವಂತೆ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು ಎಂದರು.
ರಾತ್ರಿ ಗಸ್ತು ಚೆಕ್ಕಿಂಗ್, ಉಸ್ತುವಾರಿ ಅಧಿಕಾರಿಗಳ ವ್ಯಾಪ್ತಿಯ ಪ್ರಮುಖ ಗಣೇಶ ಪ್ರತಿಷ್ಠಾಪನಾ, ಮಸೀದಿ ಮತ್ತು ಇನ್ನಿತರ ಪ್ರಮುಖ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ರಾತ್ರಿ ಗಸ್ತು ಅಧಿಕಾರಿಗಳು ತಮ್ಮ ವಾಹನಗಳ ಟಾಪ್ಲೈಟ್ಗಳನ್ನು ಕಡ್ಡಾಯವಾಗಿ ಬಳಸಬೇಕು. ಪರಿಶೀಲಿಸಿದ ಸ್ಥಳದ ಬಗ್ಗೆ ಆಯಾ ದಿನವೇ ರಿಜಿಸ್ಟರ್ ಪುಸ್ತಕದಲ್ಲಿ ಮಾಹಿತಿ ನಮೂದಿಸಬೇಕು ಎಂದರು.
ಗಣೇಶ ಮೂರ್ತಿ ವಿಸರ್ಜನೆಯ ದಿನಗಳಂದು ಮೆರವಣಿಗೆಯ ಸಮಯದಲ್ಲಿ ಎಸ್ಪಿ, ಎಎಸ್ಪಿ, ಡಿಎಸ್ಪಿ, ಸಿಪಿಐ, ಪಿಐ, ಪಿಎಸ್ಐ ಅಧಿಕಾರಿಗಳು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಾದ ದೇವಸ್ಥಾನ, ಚರ್ಚ್, ಮಸೀದಿ ಇತ್ಯಾದಿ ಜನಸಂದಣಿ ಪ್ರದೇಶಗಳಲ್ಲಿ ಹಾಜರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚರ ವಹಿಸಬೇಕು ಎಂದು ಸೂಚಿಸಿದರು.
ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿನ ವ್ಯವಸ್ಥೆಗಳ ಕುರಿತು ಸ್ಥಳೀಯ ಆಡಳಿತ, ವಿದ್ಯುತ್ ವಿತರಣಾ, ಅಗ್ನಿಶಾಮಕ ದಳ ಹಾಗೂ ಇತರೇ ಇಲಾಖೆಗಳೊಂದಿಗೆ ಸಂಪರ್ಕದೊಂದಿಗೆ ಅಗತ್ಯ ಸಹಕಾರ ಪಡೆದು ಯಾವುದೇ ಅವ್ಯವಸ್ಥೆ ಉಂಟಾಗದಅತೆ ನೋಡಿಕೊಳ್ಳಬೇಕು. ಅವಶ್ಯ ಎನಿಸಿದಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕೃತಕ ವಿಸರ್ಜನಾ ಸ್ಥಳಗಳನ್ನು ನಿರ್ಮಿಸಲು ಕ್ರಮ ವಹಿಸಬೇಕು ಎಂದರು.