ಸೈಬರ್ ವಂಚನೆಯಿಂದ ಜಾಗೃತರಾಗಿ

Published on

ಬಳ್ಳಾರಿ : ಇಂದಿನ ಡಿಜಿಟಲ್ ಯುಗದಲ್ಲಿ ಯುವ ಸಮುದಾಯ ಸೇರಿದಂತೆ ಸಾರ್ವಜನಿಕರು ಸೈಬರ್ ವಂಚನೆಯಿಂದ ಜಾಗೃತರಾಗಬೇಕು ಎಂದು ವಲಯ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ ಹೇಳಿದರು.

ಇಲ್ಲಿನ ನೂತನ ಡಿಸಿ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಜನಜಾಗೃತಿ ಓಟ’ಗೆ ಚಾಲನೆ ನೀಡಿ ಮಾತನಾಡಿದರು. ದಿನೇದಿನೇ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳಿಗೆ ವಿದ್ಯಾವಂತರೂ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಯಾವುದೇ ಅಪರಿಚಿತ ಕರೆ ಬಂದಲ್ಲಿ ಪ್ರತಿಕ್ರಿಯಿಸಬಾರದು. ಮೋಸಕ್ಕೆ ಬಲಿಯಾಗಿ, ಹಣ ಕಳೆದುಕೊಳ್ಳಬೇಡಿ. ಇದರಿಂದ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ ಎಂದರು.

ವಾಹನ ಸವಾರರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಯುವ ಸಮುದಾಯ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.

ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಯುವ ಸಮೂಹ ಸೇರಿದಂತೆ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸೈಬರ್ ವಂಚನೆಗೆ ಒಳಗಾಗದಂತೆ ಸುತ್ತಮುತ್ತಲಿನವರಿಗೂ ಈ ಕುರಿತ ಜಾಗೃತಿ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ರಸ್ತೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುತ್ತೇನೆ ಎಂದು ಪ್ರತಿಜ್ಞೆ ಕೈಗೊಳ್ಳುವ ಆನ್ ಲೈನ್ ಆಪ್ ಕ್ಯೂರ್ ಆರ್ ಕೋಡ್ ಅನ್ನು ಬಿಡುಗಡೆಗೊಳಿಸಲಾಯಿತು.

ಜನ ಜಾಗೃತಿ ಓಟವು ನಗರದ ನೂತನ ಜಿಲ್ಲಾಡಳಿತ ಭವನದ ಆವರಣದಿಂದ ಆರಂಭಗೊಂಡು ಗಡಿಗಿ ಚನ್ನಪ್ಪ ವೃತ್ತ, ಹಳೇ ತಾಲೂಕು ಕಚೇರಿ ರಸ್ತೆ, ಹೆಚ್.ಆರ್.ಗವಿಯಪ್ಪ (ಮೋತಿ ಸರ್ಕಲ್), ವಾಲ್ಮೀಕಿ ಸರ್ಕಲ್, ಕನಕದುರ್ಗಮ್ಮ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣ ಮುಖಾಂತರ ಮರಳಿ ನೂತನ ಜಿಲ್ಲಾಡಳಿತ ಭವನದ ಆವರಣದವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net