ಬಳ್ಳಾರಿ ; ರಾಜ್ಯ ಸರ್ಕಾರದ ಸಂಪುಟದಲ್ಲಿ ಮತ್ತೋಮ್ಮೆ ಸಚಿವನಾಗಿ, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಜೈಲಿಗೆ ಕಳುಹಿಸುವೆ ಎಂದು ಶಾಸಕ ಬಿ.ನಾಗೇಂದ್ರ ಶಪಥ ಮಾಡಿದರು.
ನಗರದ ತಾಪಂ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿ.ಶ್ರೀರಾಮುಲು ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ನಾನು ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದು ,ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರಿಗೆ ಸಿಹಿ ತಿನಿಸು ತಿಂದಷ್ಟು ಸಂತೋಷವಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದಲ್ಲಿನ ಹಗರಣಗಳು ಬಯಲಿಗೆ ಎಳೆಯುವೆ. ಬಿ.ಶ್ರೀರಾಮುಲು ಜೈಲಿಗೆ ಸೇರುವ ಕಾಲ ಸನಿಹಿತವಾಗಿದೆ ಎಂದು ಭವಿಷ್ಯ ನುಡಿದರು.
ಕಳೆದ ಎರಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿ.ಶ್ರೀರಾಮುಲುಗೆ ಇನ್ನೂ ಬುದ್ಧಿ ಬಂದಿಲ್ಲ. ಅಲ್ಲದೆ, ಜಿಲ್ಲಾ ಉಸ್ತುವಾರಿ ಮಂತ್ರಿಯಾದ ವೇಳೆ ಎಷ್ಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಿರಿ ಎಂಬ ಮಾಹಿತಿಯಿದೆ. ಬಿಜೆಪಿ ಸರ್ಕಾರದಲ್ಲಿ ನೀನು ಡಿಸಿಎಂ ಯಾಗಬೇಕು ಎಂಬ ಸಂಕಲ್ಪ ತೊಟ್ಟಿದ್ದೆ. ಆದರೆ, ಇನ್ನೂ ಇಪ್ಪತ್ತು ವರ್ಷಗಳ ಬಳಿಕ ನಾನೇ ಕಾಂಗ್ರೆಸ್‌ನಿಂದ ಡಿಸಿಎಂ ಯಾಗುವೆ. ನೀವು ನನ್ನನ್ನು ಎಷ್ಟು ತುಳಿಯುವಿರಿ, ನಾನು ಅದರ ಎರಡಷ್ಟು ಚೆಂಡಿನಂತೆ ಪುಟಿದೇಳುವೆ. ಶಾಸಕ ಜಿ.ಜನಾರ್ದನರೆಡ್ಡಿ, ಬಿ.ಶ್ರೀರಾಮುಲು ಒಬ್ಬರನ್ನು ಒಬ್ಬರು ಕೂಗಿಕೊಂಡರೆ ಕೇಳುವಷ್ಟು ಮನೆಗಳು ಹತ್ತಿರವಿದ್ದು, ಇವರು ಇಬ್ಬರು ಜತೆಯಾಗಲು ಬಿಸಿ ನೀರು ಏಕೆ ಬೇಕು ಎಂದು ಟೀಕಿಸಿದರು.
ಮರಳಿ ಸಚಿವ ಸ್ಥಾನ ನೀಡಲು ವಿಳಂಬಕ್ಕೆ ಹೈಕಮಾಂಡ್ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನನಗೆ ಮರಳಿ ಸಚಿವ ಸ್ಥಾನ ನೀಡುವುದರ ಬಗ್ಗೆ ತೀರ್ಮಾನಿಸಲಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬೇರೆ ಬ್ಯಾಂಕ್‌ಗೆ ವರ್ಗಾಣೆಯಾಗಿದ್ದು ನನ್ನ ಗಮನಕ್ಕೆ ಇಲ್ಲ, ಆದ್ದರಿಂದ ಈ ಹಗರಣದಲ್ಲಿ ಸಿಲುಕಿದೆ. ಎಸ್‌ಐಟಿ ಸಂಗ್ರಹಿಸಿರುವ ದಾಖಲೆಗಳನ್ನು ಸಿಬಿಐಗೆ ನೀಡಿ ಎಂಬುದಾಗಿ ಹೈಕೋರ್ಟ್ ಆದೇಶಿದೆ. ಈವರೆಗೆ ನನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದರು.
ಬಿಹಾರದಲ್ಲಿ ಕಾಂಗ್ರೆಸ್‌ನ ಅಲೆಯನ್ಸ್ ಪಕ್ಷಗಳು ಗೆಲ್ಲುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಾಧನ ಸಮಾವೇಶ ಆಯೋಜಿಸಲಾಗುವುದು. ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಲು ನನ್ನ ಶ್ರಮ ಕೂಡವಿದೆ. ಈವರೆಗೂ ನಡೆದಿರುವ ಎಲ್ಲ ಸಮ್ಮೇಳನಗಳಿಗಿಂತ ವಿಭಿನ್ನವಾಗಿ ಆಚರಿಸಲಾಗುವುದು. ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ಮಟ್ಟಹಾಕಲು ಮನೆ ಮನೆಗೆ ಪೊಲೀಸ್ ಅಭಿಯಾನ ಆರಂಭಿಸಲಿದ್ದೇವೆ ಎಂದರು.