ಬಿ.ನಾಗೇಂದ್ರ ಗೆ ಸಚಿವ ಸ್ಥಾನ ಮುನ್ನೂಲೆ

Published on

ಬಳ್ಳಾರಿ; ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರಿಗೆ ಮರಳಿ ಸಚಿವ ಸ್ಥಾನ ನೀಡುವದರ ಬಗ್ಗೆ ಮತ್ತೋಮ್ಮೆ ಮುನ್ನೂಲೆಗೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಳೆದ ಒಂದು ವರ್ಷದಿಂದ ಸ್ಥಾನದಿಂದ ವಂಚಿತರಾಗಿರುವ ಬಿ.ನಾಗೇಂದ್ರ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಳೆದ ನಾಲ್ಕೈದು ಬಾರಿ ಕೇಂದ್ರ ಹಾಗೂ ರಾಜ್ಯ ನಾಯಕರು ಸೆಳೆಯಲು ವಿಫಲರಾಗಿದ್ದರು. ಆದರೆ, ಈ ಬಾರಿ ಶತಗತಯವಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಗೇಂದ್ರ ಕೇಂದ್ರ ನಾಯಕರ ಒಂದು ಸುತ್ತೂ ಚರ್ಚಿಸಿದ್ದು ಇದೇ ಜೂ 6ರಂದು ದೆಹಲಿಯಲ್ಲಿ ನಡೆಯುವ ಎಐಸಿಸಿ ಸಭೆಯಲ್ಲಿ ಸಚಿವ ಸ್ಥಾನ ನೀಡುವುದರ ಬಗ್ಗೆ ನಿರ್ಧಾರ ಹೊರಬೀಳಲಿದೆ ಎಂಬುದಾಗಿ ಮೂಲಗಳು ತಿಳಿಸಿದವು.

ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸದ್ಯ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಬಿ.ಝಡ್. ಜಮೀರ್ ಅಹ್ಮದ್‌ಖಾನ್ ಜಿಲ್ಲೆಯ ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪ ಬಲವಾಗಿದೆ. ಅಲ್ಲದೆ, ಕಳೆದ ಒಂದು ವರ್ಷದಿಂದ ಜಿಲ್ಲೆ ಹಾಗೂ ತಾಲೂಕಿನ ವಿವಿಧಡೆ ಅಭಿವೃದ್ಧಿ ಕಾಮಗಾರಿಗಳು ಕೆಲವಡೆ ಕುಂಠಿತಗೊಂಡರೆ ಹಾಗೂ ಇನ್ನೊಂದಡೆ ಅಮೆಗಾತಿ ಹಾಗೂ ಗುಣಮಟ್ಟದ ಕೊರತೆ ನಡುವೆ ಕಳೆಪಯಿಂದ ಕೂಡಿವೆ. ಕಾಲಕಾಲಕ್ಕೆ ಸಭೆ ನಡೆಸಿ ಅಧಿಕಾರಿಗಳ ಕಾರ್ಯ ಪ್ರವೃತ್ತಿ ಪರಿಶೀಲಿಸಬೇಕಾದ ಸಚಿವರ ಅನುಪಸ್ಥಿತಿಯಿಂದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅವರು ಆಡಿದ್ದೇ ಆಟ ಎಂಬಂತೆ ಬಿಂಬಿತವಾಗಿದೆ. ಇದಲ್ಲದೆ, ಈಗಾಗಲೇ ಹಲವು ಕಟ್ಟಡಗಳ ಉದ್ಘಾಟನೆ, ಪ್ರತಿಮೆಗಳ ಅನಾವರಣ, ರಸ್ತೆ ಅಭಿವೃದ್ಧಿಗೆ ಚಾಲನೆ ದೊರೆಯಬೇಕಿದೆ. ಆದರೆ, ಸಂಬಂಧಪಟ್ಟ ಜನಪ್ರತಿನಿಧಿಗಳ ದಿನಾಂಕ ನಿಗದಿಯಾಗದೆ ಇರುವುದರಿಂದ ಉದ್ಘಾಟನೆಯಾಗದೆ ಉಳಿದಿವೆ. ಇತ್ತೀಚಿನ ಪೂರ್ವ ಮುಂಗಾರು ಮಳೆಯಿಂದ ಅಧಿಕಾರಿಗಳು ಪೂರ್ವ ಸಿದ್ಧತೆ ಕೈಗೊಳ್ಳದೆ ಇದ್ದರಿಂದ ಜಿಲ್ಲೆಯ ಜನತೆ ನಲುಗಿದ್ದರು. ಏನೇ ಇರಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮನಗೊಂಡು ಮರಳಿ ಸಚಿವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕಾರ್ಯಕರ್ತರ ಆಶಯವಾಗಿದೆ.

ಶಾಸಕರ ಮನವಿ : ಜಿಲ್ಲೆಯ ಐದು ತಾಲೂಕಿನಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೊದಲ ಬಾರಿಗೆ ಬಿ.ನಾಗೇಂದ್ರ ಜಿಲ್ಲಾ ಉಸ್ತುವಾರಿಯಾದ ಬಳಿಕ ಎಲ್ಲ ಕ್ಷೇತ್ರದ ಶಾಸಕರು ಸಚಿವರ ಸಲುಗೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಗಿಟ್ಟಿಸಿಕೊಂಡಿದ್ದರು. ಆದರೆ, ಒಂದೇ ವರ್ಷದಲ್ಲೇ ಸಚಿವ ತಪ್ಪಿದ ಬಳಿಕ ಅಭಿವೃದ್ಧಿ ಕುಂಠಿತಗೊಂಡಿವೆ. ಆದ್ದರಿಂದ, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಸಯ್ಯದ್ ನಾಸೀರ್ ಹುಸೇನ್ ಅವರ ಜತೆ ಜಿಲ್ಲೆಯ ಎಲ್ಲ ಶಾಸಕರು ಒಕ್ಕೂರಲಾಗಿ ಬಿ.ನಾಗೇಂದ್ರ ಮರಳಿ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾರೆ. ಶಾಸಕರ ಮನವಿ ಸ್ಪಂದಿಸಿದ ಕೇಂದ್ರ ನಾಯಕರು ಮುಂದಿನ ಎಐಸಿಸಿ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ ಎಂದು ಶಾಸಕರ ಅಪ್ತರು ತಿಳಿಸಿದರು. ಒಟ್ಟಾರೆ ಮರಳಿ ನಾಗೇಂದ್ರ ಅಥವಾ ಹೊಸ ಶಾಸಕರಿಗೆ ಮನ್ನಣೆ ಹಾಗೂ ಸದ್ಯ ಉಸ್ತುವಾರಿ ವಹಿಸಿಕೊಂಡಿರುವ ಜಮೀರ್ ಅಹ್ಮದ್ ಅವರನ್ನೇ ಮುಂದುವರೆಸಲಿದೆ ಎಂಬುದು ಕಾದು ನೋಡಬೇಕಿದೆ.

ಕೋಟ್... ಬಿ.ನಾಗೇಂದ್ರ ಅವರನ್ನು ಮಂತ್ರಿ ಮಾಡಿದರೆ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ಎಐಸಿಸಿ ನಾಯಕ ರಾಹುಲ್‌ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಅವರಿಗೂ ಜಿಲ್ಲೆಯ ಎಲ್ಲ ಶಾಸಕರು ಮನವಿ ಮಾಡಿದ್ದೇವೆ.

-ನಾರಾ ಭರತರೆಡ್ಡಿ, ಶಾಸಕ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net