ಬಳ್ಳಾರಿ : ಪ್ರಶಿಕ್ಷಣಾರ್ಥಿಗಳ ಫಲಿತಾಂಶ ಹೆಚ್ಚಿಸಲು ಕಳ್ಳ ದಾರಿ ಹಿಡಿಯುತ್ತಿದ್ದ ವಿಎಸ್‌ಕೆ ವಿವಿಯ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಬಿ.ಇಡಿ ಕಾಲೇಜುಗಳ ಬಂಡವಾಳ ಬಯಲು ಆಗಿದೆ. ವಾಸ್ತವದಲ್ಲಿ ವಿದ್ಯಾರ್ಥಿಗಳು ಒಂದು ಅಂಕ ತೆಗೆದುಕೊಂಡಿದ್ದರೆ, ಆನ್‌ಲೈನ್ ನಲ್ಲಿ ಮತ್ತೊಂದು ಹೆಚ್ಚಿನ ಅಂಕ ನಮೂದಿಸಿ ಈ ಮೂಲಕ ಫಲಿತಾಂಶ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದ ಬಿಇಡ್ ಕಾಲೇಜುಗಳ ಕಳ್ಳಾಟ ಬೆಳಕಿಗೆ ಬಂದಿದೆ.
ಏನಿದು ಕಳ್ಳಾಟ...?: ಕಾಲೇಜಿಗೆ ಬರದಿದ್ದರೂ, ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿದ್ದರೂ ಬಿ.ಇಡಿ ಪದವಿ ಕೈಸೇರುವುದು ನಿಶ್ಚಿತ! ಅಚ್ಚರಿಯಾದರೂ ಇದು ಸತ್ಯ. ಆದರೆ, ನೀವು ಲಕ್ಷಾಂತರ ರೂಪಾಯಿ ಕೈಬಿಚ್ಚಲು ಸಿದ್ಧವಾಗಿರಬೇಕಷ್ಟೇ. ವಿವಿ ವ್ಯಾಪ್ತಿಯ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆ ವ್ಯಾಪ್ತಿಯ 20 ಕಾಲೇಜುಗಳಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಆದರೆ, ಹಲವು ಕಾಲೇಜುಗಳಲ್ಲಿ ಪ್ರಶಿಕ್ಷಣಾರ್ಥಿಗಳು ತರಗತಿಗೆ ಹಾಜರಾಗದೆ, ನೇರವಾಗಿ ಪರೀಕ್ಷೆಗೆ ಬರುವುದಾಗಿ ತಿಳಿಸಿದರೂ ಪ್ರವೇಶ ನೀಡಲಾಗುತ್ತಿದೆ.
ತರಗತಿಗಳಿಗೆ ರೆಗ್ಯುಲೆರ್ ಆಗಿ ವಿದ್ಯಾರ್ಥಿಗಳು ಹಾಜರಾಗದೆ ಇದ್ದರೂ ಆಂತರಿಕ ಪರೀಕ್ಷೆಗಳಲ್ಲಿ ಪೂರ್ಣ ಪ್ರಮಾಣದ ಅಂಕಗಳು ನೀಡಿ ಪ್ರವೇಶಾತಿ ಹೆಚ್ಚಿಸಿಕೊಳ್ಳುವುದಲ್ಲದೆ, ವರ್ಷದಿಂದ ವರ್ಷಕ್ಕೆ ಶುಲ್ಕ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಇದರಿಂದ ನಿಯಮಿತವಾಗಿ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ, ಕೆಲ ಕಾಲೇಜು ಆಡಳಿತ ಮಂಡಳಿಯವರು ಆನ್ ಲೈನ್ ನಲ್ಲಿ ಹೆಚ್ಚಿನ ಅಂಕ ನಮೂದಿಸಿದ್ದರಿಂದ ಫಲಿತಾಂಶ ಪ್ರಕಟಿಸಲು ವಿಳಂಬವಾಗಲಿದೆ. ಈ ಎಲ್ಲ ದೂರುಗಳು ಬಗ್ಗೆ ಕೆಲ ವಿದ್ಯಾರ್ಥಿಗಳು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದರಂತೆ ಕಳೆದ ಕೆಲ ವರ್ಷಗಳ ಹಿಂದೆಯೂ ಕೂಡ ಈ ಹಿಂದೆ ಕಾಲೇಜುಗಳಿಗೆ ಬಾರದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ನೀಡಿ ಟೀಕೆಗೆ ಗುರಿಯಾಗಿದ್ದ ಕೆಲವು ಬಿ.ಇಡಿ ಕಾಲೇಜುಗಳಿಗೆ ವಿವಿಯಿಂದ ದಂಡ ವಿಧಿಸಲು ಕಮಿಟಿ ರಚಿಸಲಾಗಿತ್ತು.
ವಿವಿಯಿಂದ ಕಮಿಟಿ ರಚನೆ : ಖಾಸಗಿ ಬಿಇಡಿ ಕಾಲೇಜುಗಳ ಆಡಳಿತ ಮಂಡಳಿಯವರೆ ಆರಂಭದಲ್ಲಿ ವಿವಿಗೆ ಉತ್ತರ ಪತ್ರಿಕೆಗಳನ್ನು ದಾಖಲಿಸುವ ಮುನ್ನ ವಿದ್ಯಾರ್ಥಿಗಳು ಪಡೆದಿರುವ ವಾಸ್ತವ ಅಂಕಗಳನ್ನು ನಮೂದಿಸಿ ಒಪ್ಪಿಸಿದ್ದಾರೆ. ಬಳಿಕ ಪ್ರಾಕ್ಟಿಕಲ್ ತಂಡ ಕಾಲೇಜುಗಳಿಗೆ ಪರಿಶೀಲನೆ ನಡೆಸುವುದಿಲ್ಲ ಎಂಬುದಾಗಿ ತಿಳಿದ ಆಡಳಿತ ಮಂಡಳಿ ಯುಯುಸಿಎಂಸ್ ತಂತ್ರಜ್ಞಾನದ ಆನ್ ಲೈನ್ ನಲ್ಲಿ ಹೆಚ್ಚಿನ ಅಂಕಗಳನ್ನು ಹಾಕಲಾಗಿದೆ ಎನ್ನಲಾಗಿದೆ. ಆದ್ದರಿಂದ, ವಿವಿಯ ಬಿಇಡಿ ಚೇರಮೇನ್ ಎನ್. ಗೋಪಾಲ್ , ಡಾ. ವಿಕ್ರಮ್, ಡಾ. ರಮೇಶ್, ವಿಜಯಲಕ್ಷ್ಮಿ, ನ್ಯಾಷನಲ್ ಕಾಲೇಜಿನ ನಾಯ್ಕ ನೇತೃತ್ವದಲ್ಲಿ ಕಮಿಟಿ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಸದ್ಯ ತನಿಖೆ ನಡೆಸಿರುವ ತಂಡವು
ಬಳ್ಳಾರಿಯ ಸತ್ಯಂ , ರಾಯಲ್ , ಶರಭೇಶ್ವರ , ಸೋನಿಯಾ ಗಾಂಧಿ, ಹರಪನಹಳ್ಳಿಯ ಟಿಎಂಎಇ, ಕೂಡ್ಲಿಗಿಯ ಜ್ಞಾನ ಮಂಟಪ, ಜ್ಞಾನ ಭಾರತಿ, ಲಕ್ಷ್ಮಿ ವೆಂಕಟೇಶ್ವರ, ಕೊಟ್ಟೂರಿನ ತುಂಗಭದ್ರಾ, ಹೊಸಪೇಟೆಯ ನ್ಯಾಷನಲ್ ಹಾಗೂ ಕೊಪ್ಪಳದ ಗವಿಸಿದ್ದೇಶ್ಚರ ಬಿಇಡಿ ಕಾಲೇಜುಗಳಿಗೆ ಸೇರಿದಂತೆ ಕೆಲ ಕಾಲೇಜುಗಳಿಗೆ ಅಕ್ರಮದ ಬಗ್ಗೆ ವರದಿ ನೀಡಿ ಐದು, ಮೂರು, ಎರಡು ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕೋಟ್...
ಬಿ.ಇಡಿ ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಲು ಕಮಿಟಿ ರಚಿಸಲಾಗಿದೆ. ವರದಿ ಬಳಿಕ ಕ್ರಮ ಜರುಗಿಸಲಾಗುವುದು.
_ ಪ್ರೊ. ಎಂ. ಮುನಿರಾಜು, ಕುಲಪತಿ, ವಿಎಸ್ ಕೆ ವಿವಿ, ಬಳ್ಳಾರಿ.