ಬಳ್ಳಾರಿ : ಆಯುರ್ವೇದ ಔಷಧಿಗೆ ತನ್ನದೇ ಆದ ಮಹತ್ವ ಇದ್ದು, ಅದನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದವು ಪುರಾತನ ಕಾಲದಿಂದಲೂ ಮಹತ್ವ ಪಡೆದುಕೊಂಡಿದೆ. ಪರಿಸರದಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ತಯಾರಾದ ಔಷಧಿಗಳು ಜನಸಾಮಾನ್ಯರ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಪೂರ್ವಜರು ದವಾಖಾನೆಗಳಿಗಿಂತ ಹೆಚ್ಚಾಗಿ ಆಯುರ್ವೇದ ಔಷಧಿಗಳ ತಯಾರಿಸಿಕೊಂಡು ಸುಸ್ಥಿರ ಆರೋಗ್ಯ ಹೊಂದಿದ್ದರು. ಪ್ರಸ್ತುತ ದಿನಮಾನಗಳಲ್ಲಿ ಜಾಗತಿಕವಾಗಿ ಉತ್ತಮ ಆರೋಗ್ಯ ಹೊಂದಲು ಆಯುರ್ವೇದದ ನಾವೀನ್ಯತೆ ಹಾಗೂ ಆಯುರ್ವೇದದ ಆವಿಷ್ಕಾರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸರಳಾದೇವಿ ಮಾತನಾಡಿ, ಆಯುರ್ವೇದವು ವಿಶ್ವ ಆರೋಗ್ಯ ಸಂಸ್ಥೆಯಿಂದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿ ಮಾನ್ಯತೆ ಪಡೆದಿದೆ. ಜಿಲ್ಲಾದ್ಯಂತ ಆಯುರ್ವೇದ ಮಹತ್ವ ತಿಳಿಸಲು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಸಪ್ತಾಹ ಕಾರ್ಯಕ್ರಮದಡಿ ಕಳೆದ ಏಳು ದಿನಗಳಿಂದ ನಾನಾ ಸ್ಥಳಗಳಲ್ಲಿ ವಿವಿಧ ಸಂಘ ಸಂಸ್ಥೆಗಳೊಡನೆ ಜತೆಗೂಡಿ ಆಯುರ್ವೇದ ಮಹತ್ವ ಸೇರಿದಂತೆ ಆಯುರ್ವೇದದ ಹಲವು ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಹೆಚ್ಚಾಗಿ ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ನಾಲ್ಕು ತಾಲೂಕು ಆಯುರ್ವೇದ ಆಸ್ಪತ್ರೆ ಮತ್ತು 45 ಆಯುರ್ವೇದ ಚಿಕಿತ್ಸಾಲಯಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಲಿದ್ದು, ಸಾರ್ವಜನಿಕರು ಆಯುರ್ವೇದ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಆಯುರ್ವೇದ ಪಿತಾಮಹರಾದ ಧ್ವನಂತರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಜಿಲ್ಲೆಯ ಆಯುರ್ವೇದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.