ಬಳ್ಳಾರಿ : ಪ್ರತಿ ಮನುಷ್ಯನಲ್ಲೂ ಕಲೆ ಸುಪ್ತವಾಗಿ ಅಡಗಿರುತ್ತದೆ. ಸರಿಯಾದ ನೆಲೆಯಲ್ಲಿ ಗುರುತಿಸಿ ಅವಕಾಶ ನೀಡಿದಾಗ ಅದು ಬೆಳಗುತ್ತದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಹೊನ್ನೂರಾಲಿ ನುಡಿದರು.
ನಗರದ ಎಸ್‌ಎಸ್‌ಎ ಕಾಲೇಜಿನಲ್ಲಿ ನಾಟಕ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಂಗಾಯಣ ಕಲಬುರ್ಗಿ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ 20 ದಿನಗಳ ಯುವ ರಂಗತರಬೇತಿ ಮತ್ತು ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನವಾಗಿ ಹೊಸ ತಲೆಮಾರಿನವರಲ್ಲಿ ಸೃಜನಾತ್ಮಕ ಪ್ರತಿಭೆಯನ್ನು ಅರಳಿಸುವ, ಹೊಸ ಭರವಸೆಯನ್ನು ತುಂಬುವ ಕೆಲಸಗಳು ಹೆಚ್ಚು ನಡೆಯಬೇಕಾದ ಅಗತ್ಯವಿದೆ ಎಂದರು.
ಭಾವಪೂರ್ಣ ಅಭಿನಯದಿಂದ ಚಲನಚಿತ್ರ ರಂಗದಲ್ಲಿ ಯಾರು ಗಟ್ಟಿಯಾಗಿ ನೆಲೆ ನಿಂತಿದ್ದಾರೋ ಅವರೆಲ್ಲರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಸಂಕಟ, ವಿಷಾದ ಮತ್ತು ಹಾಸ್ಯದ ಭಾವಗಳನ್ನು ಅವರು ಮಾತ್ರ ಕಲಾತ್ಮಕವಾಗಿ ಅಭಿನಯಿಸಿ ಹೊಸ ಹೊಳಪು ಕೊಡಲು ಸಾಧ್ಯ ಎಂದರು.
ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಮಾತನಾಡಿ, ದಿನನಿತ್ಯ ಸಂದರ್ಭಕ್ಕೆ ತಕ್ಕಂತೆ ನಾವು ಸುಳ್ಳನ್ನು ಸತ್ಯ ಎನ್ನುವಂತೆ ಅಭಿನಯಿಸಿ ತೋರಿಸುತ್ತೇವೆ ಎಂದರೆ ನಮ್ಮೊಳಗಡೆ ಒಬ್ಬ ನಟನಿದ್ದಾನೆ ಎಂದು ಅರ್ಥ. ಹಾಗೆ ನೋಡಿದರೆ ಸುಳ್ಳನ್ನೇ ಸತ್ಯ ಎಂದು ಭ್ರಮಿಸಿ ಅಭಿನಯಿಸಿ ತೋರಿಸುವುದೇ ನಾಟಕ. ರಂಗಭೂಮಿಗೆ ದೊಡ್ಡ ಶಕ್ತಿ ಇದೆ. ನಾಟಕದ ಮೂಲಕ ನಾವು ನಿಜವಾದ ಮನುಷ್ಯರಾಗಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಈ ತರಬೇತಿಯ ಮೂಲಕ ಕಲಿಯುವ ಹಂಬಲದೊಂದಿಗೆ ನಾಟಕದ ಬಗೆಗೆ ಪ್ರೀತಿ, ಅಭಿಮಾನ, ಬದ್ಧತೆಯನ್ನು ಮೈಗೂಡಿಸಿಕೊಳ್ಳಲಿ ಎಂದು ಆಶಿಸಿದರು.