ಅತಿಥಿ ಉಪನ್ಯಾಸಕರ ನೇಮಕ ಗೊಂದಲ

Published on

ಬಳ್ಳಾರಿ : ರಾಜ್ಯಾದ್ಯಂತ ಪ್ರಸ್ತಕ ಸಾಲಿನಲ್ಲಿ ಆ.4 ರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭಗೊಂಡಿವೆ. ಆದರೆ, ಅತಿಥಿ ಉಪನ್ಯಾಸಕರ ನೇಮಕದ ಗೊಂದಲದಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಹಿನ್ನೆಡೆಯಾಗುವ ಭೀತಿ ಎದುರಾಗಿದೆ.

ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಆರು ಸಾವಿರ ಕಾಯಂ ಪ್ರಾಧ್ಯಾಪಕರಲ್ಲಿ , ಎರಡು ಸಾವಿರ ಪ್ರಾಧ್ಯಾಪಕರು ಪ್ರಸ್ತಕ ನಿವೃತ್ತಿ ಹೊಂದಿದ್ದಾರೆ. ರಾಜ್ಯಾದ್ಯಂತ 10,658 ಅತಿಥಿ ಉಪನ್ಯಾಸಕರಲ್ಲಿ 4,645 ಯುಜಿಸಿ ಅರ್ಹತೆ ಹೊಂದಿದ್ದು, 6,013 ಅರ್ಹತೆ ಹೊಂದಿಲ್ಲ. ಕಳೆದ ಎರಡು ವರ್ಷದ ಹಿಂದೆ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕೆಲವು ಮಾನದಂಡಗಳನ್ನು ಪ್ರಕಟಿಸಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ 2023-24ನೇ ಸಾಲಿನ ಅತಿಥಿ ಉಪನ್ಯಾಸಕರನ್ನೇ 2024-25ನೇ ಸಾಲಿಗೂ ಮುಂದುವರಿಸಲಾಗಿತ್ತು. ಪ್ರಸ್ತುತ ಮತ್ತೆ ಯುಜಿಸಿ ನಿಯಮಗಳ ಅನ್ವಯ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂಬುದಾಗಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಲಾಗಿತ್ತು. ಇದು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರು ಯುಜಿಸಿ ಅರ್ಹತೆ ಹೊಂದದೆ ಇರುವುದರಿಂದ ಉಪನ್ಯಾಸಕ ಹುದ್ದೆಯಿಂದ ವಂಚಿತರಾಗಲಿದ್ದಾರೆ ಎಂಬ ಉದ್ದೇಶದಿಂದ ಹಿರಿಯ ಅಭ್ಯರ್ಥಿಗಳು ನ್ಯಾಯಾಲಯ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಸದ್ಯದ ನೇಮಕಾತಿ ಪ್ರಕ್ರಿಯೆಗೆ ತಾತ್ಕಲಿಕ ತಡೆ ನೀಡಿ ಆ.28ಕ್ಕೆ ವಿಚಾರಣೆ ಮುಂದೂಡಿದೆ.

ಅತಿಥಿ ಉಪನ್ಯಾಸಕರೆ ಆಸರೆ : ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ. 85ರಷ್ಟು ಅತಿಥಿ ಉಪನ್ಯಾಸಕರೇ ಅವಲಂಬಿತವಾಗಿವೆ. ಕೆಲವೊಂದು ವಿಷಯಗಳಿಗೆ ಈವರೆಗೂ ಕಾಯಂ ಪ್ರಾಧ್ಯಾಪಕರಿಲ್ಲದೆ ಅತಿಥಿ ಉಪನ್ಯಾಸಕರೆ ಆಸರೆಯಾಗಿದ್ದಾರೆ. ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಸಾವಿರದಿಂದ ಎರಡು ಸಾವಿರದವರೆಗೆ ವಿದ್ಯಾರ್ಥಿಗಳಿಗೆ ಕೇವಲ ಹತ್ತರಿಂದ ಹದಿನೈದು ಕಾಯಂ ಪ್ರಾಧ್ಯಾಪಕರಿದ್ದಾರೆ. ಆದ್ದರಿಂದ, ಸದ್ಯ ಅತಿಥಿ ಉಪನ್ಯಾಸಕರ ನೇಮಕಾತಿ ಗೊಂದಲದಿಂದ ನಿತ್ಯ ನಾಲ್ಕರಿಂದ ಐದು ಕ್ಲಾಸ್‌ಗಳು ನಡೆಯಬೇಕಿದ್ದ ಕಾಲೇಜುಗಳು ಒಂದು ಅಥವಾ ಎರಡು ಮಾತ್ರ ನಡೆಯುತ್ತಿವೆ. ಕಾಲೇಜಿನಲ್ಲಿ ನಾನಾ ಚಟುವಟಿಕೆಗಳಿಗೆ ಪ್ರಾಧ್ಯಾಪಕರು ಪಾಲ್ಗೂಂಡರೆ ಅವು ಕೂಡ ನಡೆಯುವುದು ತೀರಾ ವಿರಳ. ಗ್ರಾಮೀಣ ಹಾಗೂ ಬಡವರ ಮಕ್ಕಳು ಕಡಿಮೆ ಶುಲ್ಕ ಕಾರಣದಿಂದ ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವುದು ಸಾಮಾನ್ಯವಾಗಿದೆ. ಕಾಲೇಜು ಆರಂಭಗೊಂಡು ತಿಂಗಳು ಕಳೆದರೂ ಕೆಲವೊಂದು ವಿಷಯಗಳ ಪಠ್ಯ ಆರಂಭವಾಗಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಅತಿಥಿ ಉಪನ್ಯಾಸಕರು ಅತಂತ್ರ : ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿದ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿದೆ. ಕಳೆದ ಎರಡ್ಮೂರು ತಿಂಗಳಿಂದ ವೇತನವಿಲ್ಲದೆ ಕುಟುಂಬ ನಡೆಸುವುದು ಕಷ್ಟವಾಗಿದೆ. ಅಲ್ಲದೆ, ಒಂದು ವೇಳೆ ನ್ಯಾಯಾಲಯದ ತೀರ್ಪು ಯುಜಿಸಿ ಮಾನದಂಡದಂತೆ ಆಯ್ಕೆ ಮಾಡಿ ಎಂಬುದಾಗಿ ತೀರ್ಪು ಪ್ರಕಟಗೊಂಡರೆ ಅತಿಥಿ ಉಪನ್ಯಾಸಕರು ಬೀದಿಗೆ ಬರಲಿದ್ದಾರೆ. ಈಗಾಗಲೇ, ಕೆಲವೊಂದು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಪ್ರತಿಭಟಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಬಾಕ್ಸ್ : ಇಲ್ಲಿನ ಸರಳಾದೇವಿ ಸತೀಶ್‌ಚಂದ್ರ ಆಗರವಾಲ್ ಹಾಗೂ ಗಾಲಿ ರುಕ್ಮೀಣಮ್ಮ ಚೆಂಗಾರೆಡ್ಡಿ ಎರಡು ಪದವಿ ಕಾಲೇಜುಗಳಲ್ಲಿ ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎರಡು ಸೇರಿ ಕೇವಲ 41 ಕಾಯಂ ಪ್ರಾಧ್ಯಾಪಕರಿದ್ದಾರೆ. ಸರಳಾದೇವಿ ಕಾಲೇಜಯೊಂದರಲ್ಲಿಯೇ 105 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರು.

ಕೋಟ್..... ಸರ್ಕಾರದಿಂದ ಈವರೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಿ ಎಂಬುದಾಗಿ ಆದೇಶ ಬಂದಿಲ್ಲ. ಶೀಘ್ರವಾಗಿ ಅತಿಥಿ ಉಪನ್ಯಾಸಕರು ನೇಮಕಗೊಂಡರೆ ವಿದ್ಯಾರ್ಥಿಗಳ ಬೋಧನೆಗೆ ಅನುಕೂಲವಾಗಲಿದೆ.

- ಪ್ರಹ್ಲಾದ್ ಚೌದರಿ, ಪ್ರಾಚಾರ್ಯ, ಎಸ್‌ಎಸ್‌ಎ ಕಾಲೇಜು, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net