ಚಿಲ್ಲಿ ಮಾರುಕಟ್ಟೆಗಾಗಿ ಎಪಿಎಂಸಿ ಬಂದ್

Published on

ಬಳ್ಳಾರಿ : ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಲು ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ವಿವಿಧ ರೈತ ಪರ ಸಂಘಟನೆಯ ಪದಾದಿಕಾರಿಗಳು ಇಲ್ಲಿನ ಎಪಿಎಂಸಿ ಬಂದ್ ಮಾಡಿ ಮಂಗಳವಾರ ಪ್ರತಿಭಟಿಸಿದರು.

ಬಳಿಕ ಎಪಿಎಂಸಿ ಮಳಿಗೆಗಳ ಮಾಲೀಕರು ಅಂಗಡಿಗಳನ್ನು ಬಂದ್ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ತಲುಪಿ, ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಸೇರಿದರು. ನಂತರ ಗಡಿಗೆ ಚೆನ್ನಪ್ಪ ವೃತ್ತದಿಂದ ಡಿಸಿ ಕಚೇರಿಗೆ ಕಾಲ್ನಡಿಗೆಯಲ್ಲಿ ಹೊರಟ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಿಡಿಸಿಸಿ ಅಧ್ಯಕ್ಷ ಯಶ್ವವಂತ್ ರಾಜ್‌ನಾಗಿರೆಡ್ಡಿ ಮಾತನಾಡಿ, ನಗರದಲ್ಲಿ ಚಿಲ್ಲಿಮನ ಮಾರುಕಟ್ಟೆ ಪ್ರಾರಂಭಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ 23.25 ಎಕರೆ ಭೂಮಿ ಮಂಜೂರು ಮಾಡಿ, ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಅನುದಾನ ನೀಡಿತ್ತು. ನಾವು, ಹೊಸ ಬೇಡಿಕೆ ಏನೂ ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ. ಐದು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಣೆ ಆಗಿರುವ ಅತ್ಯಾಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ಕೇಳುತ್ತಿದ್ದೇವೆ ಎಂದರು. ಜಿಲ್ಲಾದ್ಯಂತ 50 ರಿಂದ 60 ಕೋಲ್ಡ್ ಸ್ಟೋರೇಜ್‌ಗಳಿವೆ. ಇನ್ನೂ ಹೆಚ್ಚಿನ ಕೋಲ್ಡ್ ಸ್ಟೋರೇಜ್‌ಗಳು ನಿರ್ಮಾಣವಾಗುತ್ತಿವೆ. ಬಳ್ಳಾರಿ ಮತ್ತು ಸುತ್ತಲಿನ ರೈತರು ಒಣ ಮೆಣಸಿನಕಾಯಿ ಮಾರಾಟ ಮಾಡಲು 400 ಕಿ.ಮೀ., ದೂರದ ಬ್ಯಾಡಗಿ ಮತ್ತು ಆಂ್ರಪ್ರದೇಶದ ಗುಂಟೂರು ಮಾರುಕಟ್ಟೆ ಅವಲಂಬಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಒಣ ಮೆಣಸಿನಕಾಯಿ ಬೆಳೆಗಾರರನ್ನು ಸಂರಕ್ಷಣೆ ಮಾಡಲಿಕ್ಕಾಗಿಯೇ ಸರ್ಕಾರ ಬಳ್ಳಾರಿಯಲ್ಲಿ ತಕ್ಷಣವೇ ಪ್ರತ್ಯೇಕವಾಗಿ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಒತ್ತಾಯಿಸಿದರು.

ಚಿಲ್ಲಿ ಮಾರುಕಟ್ಟೆ ನಿರ್ಮಾಣದಲ್ಲಿ ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಯ ರೈತರು ಸುಲಭವಾಗಿ ಮತ್ತು ತ್ವರಿತವಾಗಿ ಬಳ್ಳಾರಿಯನ್ನು ತಲುಪಿ, ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಲಿದೆ. ರಸ್ತೆಯಲ್ಲಿ ನಡೆಯುವ ಅನೇಕ ಅವಘಡಗಳನ್ನು ತಪ್ಪಿಸಲೂ ಸಾಧ್ಯಗುತ್ತದೆ. ಈ ಮೂಲಕ ಸ್ಥಳೀಯ ಅಭಿವೃದ್ಧಿ, ರೈತರ ಹಿತರಕ್ಷಣೆ ಮತ್ತು ವ್ಯಾಪಾರಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಬಾಕ್ಸ್ : ಮಾರುಕಟ್ಟೆ ನಿರ್ಮಾಣಕ್ಕಾಗಿ ಬಂದ್‌ಗೆ ಕರೆ ನೀಡಿದ ಹಿನ್ನಲೆ ಎಪಿಎಂಸಿ ಆವರಣದಲ್ಲಿ ಬಹುತೇಕ ಮಳಿಗೆಗಳು ಮುಚ್ಚಿದ್ದವು. ಮುಂಚಿತವಾಗಿಯೇ ಎಪಿಎಂಸಿ ಬಂದ್ ಬಗ್ಗೆ ಮಾಹಿತಿ ನೀಡಿದ್ದರಿಂದ ರೈತರು ಧ್ಯಾನಗಳನ್ನು ಎಪಿಎಂಸಿಗೆ ತಂದಿರಿಲ್ಲಿಲ್ಲ. ಎಪಿಎಂಸಿ ಆವರಣರಣದ ಪೊಲೀಸ್ ಠಾಣೆಯ ರಸ್ತೆಯಲ್ಲಿ ಕೆಲವರು ತರಕಾರಿ ಮಾರಾಟ ಮಾಡುವುದು ಕಂಡು ಬಂತು. ವ್ಯಾಪಾರ ವಹಿವಾಟು ಇಲ್ಲದೆ ಮಳಿಗೆಗಳು ಮುಚ್ಚಿದ್ದರಿಂದ ಎಪಿಎಂಸಿ ಬಿಕೋ ಎನ್ನತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net