ವಾರ್ಷಿಕ ಮಹಾಸಭೆ ಆ. 22

Published on

ಬಳ್ಳಾರಿ : ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆ ಆ.22 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.

ನಗರದ ಪತ್ರಿಕಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಭೆಗೆ ಸಚಿವರಾದ ಕೆ.ಎನ್.ರಾಜಣ್ಣ, ಎಂ.ಬಿ.ಪಾಟೀಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಆರ್ಥಿಕ ಸಮಾನತೆಗಾಗಿ ಕಳೆದ 121 ವರ್ಷಗಳ ಹಿಂದೆ ಪ್ರಥಮ ಸಹಕಾರಿ ಸಂಘ ಗದಗ ಜಿಲ್ಲೆಯ ಕಣಗಿನಾಳ್ ನಲ್ಲಿ ಪ್ರಾರಂಭಿಸಲಾಯಿತು. 1990ರ ನಂತರ ಸಹಕಾರ ಸಂಘದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಕುಂಟಿತಗೊಂಡಿತು. ನಂತರ ಸೌಹಾರ್ದ ಕಾಯ್ದೆ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯತ್ತ ಸಾಗಿತ್ತು. ಆದ್ದರಿಂದ, ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು 25ವರ್ಷ ಪೂರೈಸಿದೆ. ಸೌಹಾರ್ದ ಸಹಕಾರಿ ರಜತ ಮಹೋತ್ಸವ ವರ್ಷ ಆಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರದಲ್ಲಿ ನೂರಕ್ಕೂ ಅಧಿಕ ಸೌಹಾರ್ದ ಸಂಘಗಳಿದ್ದು ಸಭೆ ಆಯೋಜಿಸಲಾಗಿದೆ. ಇದರಲ್ಲಿ ಇತ್ತೀಚಿನ ಸೈಬರ್ ಕ್ರೈಂ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಗುವುದು. ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸಹಕಾರಿಗಳ ಸಂಖ್ಯೆ, ಸದಸ್ಯರು, ಶೇರು ಬಂಡವಾಳ, ಠೇವಣಿ, ನೀಡಿದ ಸಾಲಗಳು, ದುಡಿಯುವ ಬಂಡವಾಳ, ಲಾಭ, ಕಾಯ್ದಿಟ ನಿಧಿಗಳು, ಉದ್ಯೋಗದಲ್ಲಿರುವವರು ಮಾಹಿತಿಯನ್ನು ವಿವರಿಸಿದರು.

ಕೇಂದ್ರ ಸರ್ಕಾರ ಸೌಹಾರ್ದ ಸಹಕಾರಿ ಸಂಶೋಧನೆಗಾಗಿ ಆನಂದ್ ತ್ರಿಭುವನ್ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ. ಇದರಿಂದ, ಸಹಕಾರಿ ಸಂಘಗಳ ಸಂಶೋಧನೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ರಾಜ್ಯದ ವಿವಿಧ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷರಾದ ಹನುಮಂತಯ್ಯ ಶೆಟ್ಟಿ, ಸತ್ಯನಾರಾಯಣ, ಕಲ್ಲಗುಡಿ ಮಂಜುನಾಥ, ಓಂಕಾರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net