ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸಿ

Published on

ಬಳ್ಳಾರಿ : ರಾಜ್ಯ ಸರ್ಕಾರ ಒಣ ಮೆಣಸಿನಕಾಯಿ ಬೆಳೆಗೆ ಶೀಘ್ರವೇ ಬೆಂಬಲ ಬೆಲೆಯನ್ನು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿ, ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಗುರುವಾರ ಸಲ್ಲಿಸಿದರು.

ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ಘೋಷಿಸದ ಕೂಡಲೇ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಒಣ ಮೆಣಸಿಕಾಯಿ ಬೆಳೆಯನ್ನು ಖರೀದಿಸಬೇಕು. ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧೀನದಲ್ಲಿ ಬರುವ ಆಲದಹಳ್ಳಿ ಗ್ರಾಮದಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪಿಸಲು 23.25 ಎಕರೆ ಪ್ರದೇಶವನ್ನು ಕಾಯ್ದಿರಿಸಿ ವರ್ಷಗಳೇ ಕಳೆದರೂ ಸಹ ಅನುಷ್ಠಾನಗೊಳಿಸಿಲ್ಲ. ಸರ್ಕಾರವು ಮಾರುಕಟ್ಟೆ ಸ್ಥಾಪನೆಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುವುದರ ಮೂಲಕ ಈ ಭಾಗದ ರೈತರಿಗೆ ಆಗುವಂತಹ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಬೇಕು. ಜಿಲ್ಲೆಯ ಸಂಸದ ಹಾಗೂ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಸರ್ಕಾರ ಆಂಧ್ರಪ್ರದೇಶದ ಸರ್ಕಾರದ ಮಾದರಿಯಂತೆ ತಕ್ಷಣವೇ ರಾಜ್ಯ ಒಣ ಮೆಣಸಿನಕಾಯಿ ಬೆಳೆಗಾರರ ಆರ್ಥಿಕ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಚಳುವಳಿಯನ್ನು ಸಂಘದಿಂದ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net