ವಿವಿಧ ವೃತ್ತಗಳಿಗೆ ಮಹನೀಯರ ಹೆಸರು ಘೋಷಣೆ

20 yerriswamy 03
Published on

ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಗೆ ವ್ಯಾಪ್ತಿಗೆ ಒಳಪಡುವ ವಿವಿಧ ವೃತ್ತಗಳಿಗೆ ಮಹನೀಯರ ಹೆಸರಗಳನ್ನು ಇಡಲಾಗುವುದು ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಗಾಂಧಿನಗರ ಬಾಲಭಾರತಿ ಶಾಲೆ ರಸ್ತೆಗೆ ‘ದಿ. ಹೇಮಾದ್ರಿಭಟ್ ರಸ್ತೆ’, ಇನ್ಫಾಫ್ಯಾಂಟರಿ ರಸ್ತೆಯ ವಾಸವಿ ಶಾಲೆ ಬಳಿ ‘ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಪುತ್ಥಳಿ’ ಸ್ಥಾಪನೆ ಮತ್ತು ವೃತ್ತಕ್ಕೆ ‘ಶ್ರೀ ಸಿದ್ದರಾಮೇಶ್ವರ ವೃತ್ತ’, ಮೋಕಾ ರಸ್ತೆಯ ಕೆಇಬಿ ವೃತ್ತವನ್ನು ‘ಶ್ರೀ ಬಸವೇಶ್ವರ ವೃತ್ತ’, ಅಲ್ಲಂ ಭವನ ಬಳಿಯ ವೃತ್ತಕ್ಕೆ ‘ಗಂಗಮ್ಮತಾಯಿ ವೃತ್ತ’, ಕಾಳಮ್ಮ ಬೀದಿಯ ಪಶು ಸಂಗೋಪನೆ ಇಲಾಖೆಯ ಬಳಿಯ ವೃತ್ತಕ್ಕೆ ‘ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಾಚಾರಿ ವೃತ್ತ’, ಬೆಂಗಳೂರು ರಸ್ತೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ರಸ್ತೆ ಬದಲು ‘ಕೋಲಾಚಲಂ ವೆಂಕಟರಾವ್ ರಸ್ತೆ’ ಕಾರ್ಕಲ್ ತೋಟ ಮುಖ್ಯ ರಸ್ತೆಗೆ ‘ನಂದಮೂರಿ ತಾರಕ ರಾಮರಾವ್’ ನಾಮಕರಣ ಮಾಡಲು ಸಭೆಯಲ್ಲಿ ಎಲ್ಲ ಸದಸ್ಯರು ಒಪ್ಪಲಾಗಿದೆ ಎಂದರು. ಅಲ್ಲದೆ, ನಗರದ ಎರಡು ಮುಖ್ಯ ವೃತ್ತಗಳಿಗೆ ಕರ್ನಾಟಕ ಏಕೀಕರಣದ ಅಂದಿನ ಶಾಸಕ ದಿ.ಹರಗಿನಡೋಣಿ ಸಣ್ಣ ಬಸವನಗೌಡ, ದಿ. ಹುತಾತ್ಮ ಪಿಂಜಾರ್ ರಂಜಾನ್ ಸಾಬ್ ಅವರ ನಾಮಕರಣ ಮಾಡುವಂತೆ ನಿವಾಸಿ ಬಿ.ಜಗದೀಶ್ ಕುಮಾರ ಅಕ್ಷೇಪಣೆ ಸಲ್ಲಿಸಿದ್ದು ಪರಿಶೀಲಿಸಿ ಕ್ರಮವಹಿಸಲಾಗುವುದು. ನಗರದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಒಳ ಚರಂಡಿ ದುರಸ್ತಿ ಕಾರ್ಯ ನಡೆಯುತ್ತಿದ್ದು ಸ್ವಚ್ಛತೆಗೆ ಅದ್ಯತೆ ನೀಡಲಾಗುವುದು ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಸಿ. ಇಬ್ರಾಹಿಂ ಮಾತನಾಡಿ, ಕೇವಲ ವೃತ್ತ ಹಾಗೂ ರಸ್ತೆಗಳಿಗೆ ನಾಮಕರಣ ಮಾಡುವುದಲ್ಲದೆ, ಅದೇ ರಸ್ತೆ ಹಾಗೂ ವೃತ್ತದ ಸುತ್ತಲಿನ ಮಳಿಗೆಗಳ ನಾಮಫಲಕದಲ್ಲಿ ವೃತ್ತದ ಹೆಸರು ಹಾಗೂ ರಸ್ತೆಯ ಹೆಸರನ್ನು ದೊಡ್ಡ ಅಕ್ಷರದಲ್ಲಿ ಅಳವಡಿಸುವಂತೆ ಮಾಡುವಂತೆ ಕ್ರಮಹಿಸಬೇಕು. ಪಾಲಿಕೆಯ ಜೆಸಿಬಿಗಳೂ ಕೇವಲ ಪಾಲಿಕೆ ಸಂಬಂಧಿಸಿದ ಕೆಲಸಕ್ಕೆ ಅಲ್ಲದೆ ಗುತ್ತಿಗೆದಾರರು ಸ್ವಂತ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ, ಎಲ್ಲ ಪಾಲಿಕೆಯ ವಾಹನಗಳಿಗೆ ಜಿಪಿಎಸ್ ಅಳವಡಿಸಿ ನಿತ್ಯ ಡೈರಿಯಲ್ಲಿ ಕೆಲಸದ ವಿವರಗಳನ್ನು ನಮೂದಿಸಬೇಕು ಎಂದು ಹೇಳಿದರು.

ಪಾಲಿಕೆ ಆಯುಕ್ತ ಖಲೀಲ್ ಸಾಬ್ ಮಾತನಾಡಿ, ನಗರದ ಮಳಿಗೆಗಳ ನಾಮಫಲಕಗಳಲ್ಲಿ ವೃತ್ತ ಹಾಗೂ ರಸ್ತೆಗಳ ಹೆಸರನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೆ ಪಾಲಿಕೆಯ ವಾಹನಗಳ ನಿತ್ಯ ಕೆಲಸದ ವಿವರವನ್ನು ಡೈರಿ ನಮೂದಿಸಲಾಗುತ್ತಿದ್ದು ಜಿಪಿಎಸ್ ಅಳವಡಿಸಲಾಗುವುದು. ಪಾಲಿಕೆಯ ವಾಹನಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಿಂದ ಹೊರಟ ಬಿಜೆಪಿ ಸದಸ್ಯರು : ಇತ್ತೀಚೆಗೆ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆ ಅಧಿಕಾರಿಗಳು ಮೋಸ ಎಸಗಿದ್ದಾರೆ. ಆದ್ದರಿಂದ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಅಲ್ಲದೆ, ಕಳೆದ ಕೆಲ ತಿಂಗಳ ಹಿಂದೆ ಪಾಲಿಕೆಯ ಮಹಮ್ಮದ್ ಗೌಸ್, ಮಹಾದೇವ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆಗೆ ಒಳಪಡಿಸಿದ್ದರು. ಅಂತಹವರ ಮೇಲೆ ಕ್ರಮ ಜರುಗಿಸದೆ ಪಾಲಿಕೆಯಲ್ಲಿ ಎಂಜನಿಯರ್ ಹುದ್ದೆಗಳ ಕೊರತೆಯಿದೆ ಎಂಬ ಕಾರಣದಿಂದ ಮಹಾದೇವ ಅವರಿಗೆ ಬಡ್ತಿ ನೀಡಲಾಗಿದೆ. ಇಂತಹವರ ಮೇಲೆ ಮೇಯರ್ ಹಾಗೂ ಕಾಂಗ್ರೆಸ್ ಕೆಲ ಸದಸ್ಯರ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಕೆಲ ಸಭೆಗಳಿಗೆ ಬಿಜೆಪಿಯ ಸದಸ್ಯರಿಗೆ ಆಹ್ವಾನ ನೀಡದೆ ಸಭೆ ಆಯೋಜಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭೆಯ ಮಧ್ಯೆದಲ್ಲಿ ಹೊರ ನಡೆದು ಅಸಮಾಧಾನ ಹೊರಹಾಕಿದರು.

ಬಾಕ್ಸ್ : ಪ್ರತಿ ಸಭೆಯಂತೆ ಈ ಸಭೆಯೂ ಕೂಡ ಒಂದೂವರೆ ಗಂಟೆ ಬಳಿಕ ಆರಂಭವಾಯಿತು. ಕಳೆದ ಬಾರಿ ಪಾಲಿಕೆ ಸದಸ್ಯ ಎಂ.ಪ್ರಭುಂಜನಕುಮಾರ ಕೇಳಿದ್ದ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ ಎಂದು ಆಯುಕ್ತರ ಗರಂ ಆದರು. ವಾರದೊಳಗೆ ನೀವು ಕೇಳಿದ ಎಲ್ಲ ಮಾಹಿತಿಯನ್ನು ಒದಗಿಸಲಾಗುವುದು ಎಂಬುದಾಗಿ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಸಮಾಜಾಯಿಷಿ ನೀಡಿದರು. ಸಭೆಯಲ್ಲಿ ಸಿ.ಇಬ್ರಾಹಿಂ ವಿಷಯ ಪ್ರಸ್ತಾಪ ವೇಳೆ ಸದಸ್ಯೆ ಎಂ.ರಾಜೇಶ್ವರಿ ಎರಡು ನಿಮಿಷ ವಾರ್ಡ್ ಸಮಸ್ಯೆಗೆ ಬಗ್ಗೆ ಚರ್ಚಿಸಲು ಕಾಲವಕಾಶ ಒದಗಿಸಿ ಎಂಬುದಾಗಿ ಮೇಯರ್ ಬಳಿ ಪ್ರಸ್ತಾಪಿಸಿದರೆ ನಾನೇನು ಸಭೆಯಲ್ಲಿ ಪುಷ್ಪಾ 2 ಸಿನಿಮಾದ ಸ್ಟೋರಿ ಹೇಳುತ್ತಿಲ್ಲ ಜನರ ಸಮಸ್ಯೆ ಹೇಳುತ್ತಿರುವೆ ಎಂದು ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದರು. ಸಭೆಯಲ್ಲಿದ್ದ ಕೆಲ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಉತ್ತರಿಸಲು ತಡಪಡಿಸಿದರು. ಕೆಲ ಸದಸ್ಯರು ತಡವಾಗಿ ಸಭೆಗೆ ಹಾಜರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net