ಖಾಲಿಯಿರುವ ಹಳೆಯ ಕೋರ್ಟ್ ಕಟ್ಟಡ

Published on

ಬಳ್ಳಾರಿ : ನಗರದಲ್ಲಿರುವ ಜಿಲ್ಲಾ ಹಳೆಯ ನ್ಯಾಯಾಲಯ ಸಂಕೀರ್ಣ ಮಳಿಗೆಗಳ ಕಟ್ಟಡವು ನೂತನ ನ್ಯಾಯಾಲಯಕ್ಕೆ ಸ್ಥಳಾಂತರಗೊಂಡು ಮೂರು ವರ್ಷಕ್ಕೂ ಅಧಿಕ ಕಳೆದಿದೆ. ಈ ಹಿನ್ನೆಲೆಯಲ್ಲಿ ಹಳೆಯ ನ್ಯಾಯಾಲಯ ಕಟ್ಟಡವು ಖಾಲಿಯಾಗಿ ಉಳಿದಿದೆ.

ಬ್ರಿಟಿಷ್ ಸರ್ಕಾರ ಜಿಲ್ಲೆಯಲ್ಲಿ ಬಲಗೊಂಡ ನಂತರ ನ್ಯಾಯಾಂಗ ವ್ಯವಸ್ಥೆ ಸ್ಥಾಪಿಸಲು ಮತ್ತು ಕಲಾಪಗಳನ್ನು ನಡೆಸಲು ಜಿಲ್ಲೆಯಲ್ಲಿ ನ್ಯಾಯಾಲಯ ನಿರ್ಮಿಸಲಾಯಿತು. ಕಟ್ಟಡವು ಇಟ್ಟಿಗೆ ಮತ್ತು ಸುಣ್ಣದ ಗಾರೆಯಿಂದ ಕಟ್ಟಲಾಗಿದೆ. ಅದರ, ದಪ್ಪ ಗೋಡೆಗಳು ಮತ್ತು ಎತ್ತರದ ಚಾವಣಿಗಳಿಂದ ಸದ್ಯ ಸುಸ್ಸಜ್ಜಿತವಾಗಿದೆ. ಅಲ್ಲದೆ, ವಿಶಾಲವಾದ ಆವರಣ ಹೊಂದಿರುವುದರಿಂದ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆಯಿಲ್ಲ. ಈಗಾಗಲೇ ಜಿಲ್ಲೆಯ ನಾನಾ ಇಲಾಖೆಗಳ ಹಳೆಯ ಕಟ್ಟಡಗಳ ಕಚೇರಿಗಳನ್ನು ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರಗೊಳಿಸುವಂತೆ ಅಭಿಪ್ರಾಯ ವ್ಯಕ್ತವಾಗಿದೆ.

ನಗರದ ಗಡಿಗಿ ಚೆನ್ನಪ್ಪ ವೃತ್ತದ ಮಹಾನಗರ ಪಾಲಿಕೆಯನ್ನು ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಅಲೆದಾಟ ತಪ್ಪಲಿದೆ ಎಂಬ ಉದ್ದೇಶದಿಂದ ಪಾಲಿಕೆ ಸ್ಥಳಾಂತರಕ್ಕೆ ಯತ್ನಿಸಲಾಗಿತ್ತು. ಅಲ್ಲದೆ, ಡಿಸಿ ಕಚೇರಿಯ ರಸ್ತೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ದಿನೇದಿನೆ ಜನರು ಹೆಚ್ಚುತ್ತಿದ್ದು ಕಿರಿದಾದ ಆವರಣದಿಂದ ವಾಹನಗಳ ಪಾರ್ಕಿಂಗ್‌ಗೆ ಹೈರಾಣಗಿದ್ದಾರೆ. ಕಚೇರಿಯನ್ನು ಹಳೆ ಕೋರ್ಟ್‌ಗೆ ಸ್ಥಳಾಂತರಿಸುವಂತೆ ಸಾರ್ವಜನಿಕರಿಂದ ಆಗ್ರಹವಾಗಿದೆ. ನಗರದ ಡಿವೈಎಸ್ಪಿ ಕಚೇರಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಹಳೆಯ ಕಟ್ಟಡದಲ್ಲಿ ನಿರ್ವಹಿಸುವ ಯಾವುದಾದರೂ ಒಂದು ಕಚೇರಿಯನ್ನು ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸಂಘ, ಸಂಸ್ಥೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಇಲಾಖೆಗಳ ಸ್ಥಳಾಂತರಕ್ಕೆ ಹಸ್ತು ಎಂದಿಲ್ಲ. ಇದರಿಂದ ಕಳೆದ ಮೂರು ವರ್ಷದಿಂದ ಹಳೆಯ ನ್ಯಾಯಾಲಯ ಕಟ್ಟಡ ಜನ ಸಂಪರ್ಕ ಇಲ್ಲದೆ ಧೂಳು ಹಿಡಿದಿದೆ. ಅಲ್ಲದೆ, ಕೋರ್ಟ್‌ನಲ್ಲಿ ಸದಾ ಜನಜಂಗುಳಿಯಿಂದ ಸುತ್ತಮುತ್ತಲಿನ ಹೊಟೇಲ್, ಅಂಗಡಿಗಳಿಗೆ ವ್ಯಾಪಾರ ಹಾಗೂ ವಹಿವಾಟು ಚೆನ್ನಾಗಿ ನಡೆಯುತ್ತಿತ್ತು. ಸದ್ಯ, ಜನ ಸಂಪರ್ಕ ಇಲ್ಲದೆ ಇರುವುದರಿಂದ ಕೆಲ ಅಂಗಡಿಗಳು ಮುಚ್ಚಿದರೆ ಕೆಲವು ಬೇರೆಡೆಗೆ ಸ್ಥಳಾಂತರಗೊಂಡಿವೆ.

ಕಾನೂನು ಕಾಲೇಜಿಗೆ ಆಸಕ್ತಿ : ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಪದವಿ ಕಾಲೇಜು ಆರಂಭಿಸಬೇಕು ಎಂಬುದಾಗಿ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. ಆದ್ದರಿಂದ, ಮುಂಬರುವ ಬಜೆಟ್‌ನಲ್ಲಿ ಕಾನೂನು ಕಾಲೇಜು ಘೋಷಣೆಯಾದರೆ ಕಟ್ಟಡದಲ್ಲಿಯೇ ಕಾಲೇಜು ಆರಂಭಿಸಲು ಚಿಂತಿಸಲಾಗಿದೆ. ಅಲ್ಲದೆ, ಈ ಹಿಂದೆ ಬಳ್ಳಾರಿ ಜಿಲ್ಲಾಧಿಕಾರಿಯೊಬ್ಬರು ವಿದ್ಯಾರ್ಥಿಗಳಿಗಾಗಿ ಕಾನೂನು ವೃತ್ತಿ ತರಬೇತಿ ಕೇಂದ್ರ ಆರಂಭಿಸಲು ಕಟ್ಟಡವನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೆಲ ಕಾರಣದಿಂದ ಅದು ತಾಂತ್ರಿಕ ಸಮಸ್ಯೆ ಎದುರಾದ ಪರಿಣಾಮ ಇತ್ಯರ್ಥವಾಗದೆ ಉಳಿದಿದೆ. ಸದ್ಯ ರಾಜ್ಯ ಸರ್ಕಾರ ಕೆಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕಟ್ಟಡವು ಜಿಲ್ಲಾಡಳಿತಕ್ಕೆ ವಹಿಸಿದರೆ ಕಾನೂನು ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಅನುಕೂಲವಾಗಲಿದೆ.

ಕೋಟ್... ರಾಜ್ಯ ಸರ್ಕಾರಕ್ಕೆ ಹಳೆಯ ನ್ಯಾಯಾಲಯ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ವಹಿಸುವಂತೆ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

- ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net