ಎರಡನೇ ಮಾರ್ಕೆಟಿಂಗ್ ಹಬ್‌ಗೆ ಯತ್ನ

Published on

ಬಳ್ಳಾರಿ ; ಜಿಲ್ಲೆಯನ್ನು ದೇಶದ ಮಾರುಕಟ್ಟೆಯ ಎರಡನೆಯ ಹಬ್ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯು ಭೌಗೋಳಿಕವಾಗಿ ಭಿನ್ನವಾಗಿದೆ. ಸಂಡೂರಿನಲ್ಲಿ ಮ್ಯಾಂಗನೀಸ್, ಕಬ್ಬಿಣದ ಅದಿರು, ಕಂಪ್ಲಿ, ಕುರುಗೋಡು ಮತ್ತು ಸಿರಗುಪ್ಪ ತಾಲೂಕಿನಲ್ಲಿ ತುಂಗಭದ್ರಾ ನದಿ ಮತ್ತು ನೀರಿದೆ. ಜಿಲ್ಲೆಯನ್ನು ಸಹಜವಾಗಿಯೇ ಬಾಂಬೆಯ ನಂತರ, ದೇಶದ ಎರಡನೇ ‘ಮಾರ್ಕೆಟಿಂಗ್ ಹಬ್ ಮಾಡುವ ಪ್ರಯತ್ನ ನಡೆದಿದೆ ಎಂದರು.

ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಬದ್ಧನಾಗಿರುವೆ. ಸಂಸದರ ನಿಧಿಯ ಶೇ. 75 ರಷ್ಟನ್ನು ವಿನಿಯೋಗಿಸುತ್ತಿರುವೆ. ಸದಾಕಾಲ ದುಡಿಯುವ ವರ್ಗ, ರೈತರು ಮತ್ತು ಜನಪರವಾಗಿರುವೆ ಎಂದರು.

ಶಾಸಕ ನಾರಾ ಭರತರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಡಿಎಂಎಫ್, ಕೆಕೆಆರ್‌ಡಿಬಿ, ರಾಜ್ಯ ಸರ್ಕಾರದ ವಿಶೇಷ ಅನುದಾನ ಸೇರಿ ಒಟ್ಟು 300 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಡಿಸಿಸಿ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಸಂಸ್ಥೆಯು ದೇಶದಲ್ಲಿಯೇ ವಿಶೇಷವಾಗಿರುವ ರೈತಣ್ಣ ಊಟ, ರೈತಣ್ಣ ಹಾಸಿಗೆ, ಯುವಶಕ್ತಿಯ ಸ್ವಾವಲಂಭನೆಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಭವಿಷ್ಯದ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಇಂಕ್ಯುಬೇಷನ್ ಸೆಂಟರ್ ಅನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ ಎಂದರು.

ನೆನೆಗುದಿಗೆ ಬಿದ್ದಿರುವ ಒಣ ಮೆಣಸಿನಕಾಯಿ ಮಾರುಕಟ್ಟೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ. ಸಂಸ್ಥೆಯು ಜಿಲ್ಲೆಯ ಮೂಲಭೂತ ಸೌಲಭ್ಯಗಳು ಮತ್ತು ಅಭಿವೃದ್ಧಿಯ ಅವಿಭಾಜ್ಯವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net