ಸರ್ವ ಧರ್ಮದ ಸಮನ್ವಯ ಭಾರತ

Published on

ಬಳ್ಳಾರಿ : ಸರ್ವಧರ್ಮ‌ ಸಮನ್ವಯ ಭಾರತ ಮಣ್ಣಿನ ಗುಣ. ಇದನ್ನು ಕಾಪಾಡಿಕೊಂಡು ಹಾಗೂ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಬುಧವಾರ ನಡೆದ ಬಳ್ಳಾರಿ ಧರ್ಮಕ್ಷೇತ್ರದ ಅಮೃತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಕರುಣೆ, ಮಾನವೀಯತೆ ಎಲ್ಲ ಧರ್ಮಗಳ ಸಾರುತ್ತವೆ. ಬಸವಣ್ಣನವರು 850 ವರ್ಷಗಳ ಹಿಂದೆ ಇವನಾರವ ಎನ್ನಬೇಡಿ, ಇವ ನಮ್ಮವ ಎನ್ನಿ ಎಂದು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಆದರೆ, ಇವತ್ತಿಗೂ ಜಾತಿ ಹೋಗಿಲ್ಲ ಬೇಸರ ವ್ಯಕ್ತಪಡಿಸಿದರು. ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ ಎಂದರು. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಒಡೆಯುತ್ತದೆ ಎಂದು ವಿವರಿಸಿದರು. ಸ್ವ ಧರ್ಮವನ್ನು ಪಾಲಿಸಿ, ಇತರೆ ಧರ್ಮಗಳನ್ನೂ ಸಹಿಸಿಕೊಳ್ಳುವ ಸಹಿಷ್ಣುತೆ ಬೆಳೆಸಿಕೊಳ್ಳುವುದೆ ಸಂವಿಧಾನದ ಮೌಲ್ಯವಾಗಿದೆ ಎಂದರು. ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಇಡೀ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ದೇಶದ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿದೆ. ದೇಶದ ಸಂವಿಧಾನದಲ್ಲಿ ಜಾತ್ಯಿತೀತತೆ ಇರಬೇಕು ಎಂಬುದಾಗಿ ಸ್ವತಃ ಕೋರ್ಟ್ ಹೇಳಿದೆ. ಸಂವಿಧಾನದ ಬಗ್ಗೆ ತಿಳಿಯದವರು ಧರ್ಮ ಆಧಾರದ ಮೇಲೆ ಧರ್ಮ ಒಡೆಯಲು ಮುಂದಾಗುತ್ತಾರೆ. ಅವರ ಬಗ್ಗೆ ಧರ್ಮ ಗುರುಗಳ ಎಚ್ಚರ ಇರಬೇಕು ಎಂದು ಕಿವಿಮಾತು ಹೇಳಿದರು. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ ಸಂವಿಧಾನದ ಆಶಯದಂತೆ ‌ನಡೆದುಕೊಳ್ಳಬೇಕು. ಅಂಬೇಡ್ಕರ್ ಅವರು ಸಂವಿಧಾನ ಅಂಗೀಕಾರ ಸಭೆಯಲ್ಲಿ ಮಾಡಿದ ಭಾಷಣವನ್ನು ಪ್ರತಿಯೊಬ್ಬರೂ ಓದಿಕೊಳ್ಳಬೇಕು. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರೆ ನೀಡಿದರು. ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಸಂಸ್ಥೆಗಳು ಎಲ್ಲ ಧರ್ಮದ ಹಾಗೂ ಜಾತಿಯ ಬಡವರಿಗೂ ಶಿಕ್ಷಣ ಕೊಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ ಎಂದು ಶ್ಲಾಘಿಸಿದರು. ಶಿಕ್ಷಣ ಹಾಗೂ ಆರೋಗ್ಯ ‌ಕ್ಷೇತ್ರಕ್ಕೆ ಕ್ರಿಶ್ಚಿಯನ್ ಧರ್ಮದ ಕೊಡುಗೆ ಅಪಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net