ಎಣಿಕೆಗೆ ಸಕಲ ಸಿದ್ಧತೆ

Published on

ಬಳ್ಳಾರಿ : ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರು ಉಪ ಚುನಾವಣೆಯ ಮತ ಎಣಿಕೆ ನ.23 ರಂದು ನಡೆಯಲಿದ್ದು, ಎಲ್ಲ ರೀತಿಯ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಚ್.ಡಿ. ರಾಜೇಶ್ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆೆ. ಇದಕ್ಕೂ ಮುನ್ನ 07 ಗಂಟೆಗೆ ಭದ್ರತಾ ಕೊಠಡಿ ತೆರೆಯಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ 253 ಮತಗಟ್ಟೆಗಳ ಮತಯಂತ್ರಗಳು, 13 ಅಂಚೆ ಮತಗಳ ಎಣಿಕೆ ಮತ್ತು ಇಟಿಪಿಬಿಎಸ್-04 ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು 14+1 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ ಳನ್ನು ನಿಯೋಜಿಸಲಾಗಿದೆ. ಮತ ಎಣಿಕಾ ಕಾರ್ಯಕ್ಕೆ 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ‍್ಸ್ಗಳನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು. ಒಟ್ಟು 253 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ 19 ಸುತ್ತು ಮತ ಎಣಿಕೆ ನಡೆಯಲಿದೆ.

ಪ್ರತಿ ಹಂತದ ಮತ ಎಣಿಕೆ ವಿವರವನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸಲು ಅನುವಾಗುವಂತೆ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗುವುದು ಎಂದರು. ಮತ ಎಣಿಕೆ ಕೇಂದ್ರ ಸುತ್ತಲೂ 100 ಮೀಟರ್ ಪ್ರದೇಶ ಆವರಣದಲ್ಲಿ ವಾಹನಗಳ ಪ್ರವೇಶವಿರುವುದಿಲ್ಲ. ಮತ ಎಣಿಕೆ ಅಂಗವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು. ಮತ ಎಣಿಕೆ ಕೇಂದ್ರವಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಅದರಲ್ಲಿ ಸಿಆರ್‌ಪಿಎಫ್, ಸಿಎಎಸ್‌ಎಫ್, ಕೆಎಸ್‌ಆರ್‌ಪಿ ಮತ್ತು ಸಿವಿಲ್ ಪೊಲೀಸ್ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net