

ಬಳ್ಳಾರಿ: ಸರ್ಕಾರಿ ನೌಕರರೆಲ್ಲರೂ ವಿಶೇಷ ವರ್ಗಕ್ಕೆ ಸೇರಿದವರಾಗಿದ್ದು, ನಾವೆಲ್ಲರೂ ಕಾನೂನು ಬದ್ಧವಾಗಿ ಮತ್ತು ಸಮಗ್ರತೆಯಿಂದ ಕೆಲಸ ಮಾಡುವುದರಿಂದ ಜನರ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದು ಎಸ್‌ಪಿ ಸೈದುಲು ಅದಾವತ್ ಹೇಳಿದರು. ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜನ ಯಾವುದೇ ಒಂದು ಯೋಜನೆಯ ಕುರಿತು ಮತ್ತು ಅದರ ಸೌಲಭ್ಯ ಪಡೆಯಲು ಬಂದಾಗ ನೌಕರರಾದ ನಾವು ಉತ್ತಮ ಸೇವೆ ಸಲ್ಲಿಸಬೇಕು. ಇದು ನಮ್ಮ ಕರ್ತವ್ಯವಾಗಿದೆ. ಸದಾ ಜನರ ಸೇವೆ ಮಾಡುವುದು ಒಂದು ಉತ್ತಮ ಕೆಲಸ. ಖಾಸಗಿ ನೌಕರರಿಗೆ ಹೋಲಿಸಿದರೆ ನಮ್ಮ ಸೇವೆ ಅತ್ಯಂತ ಉತ್ತಮಗಿದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕರ್ನಾಟಕ ಭಾಗದಲ್ಲಿ ನೋಡುವುದಾದರೆ ಅಲ್ಲಿನ ನೌಕರರು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸುತ್ತಾರೆ. ಆದ್ದರಿಂದ, ಅಲ್ಲಿನ ಆಡಳಿತವು ಮುಂಚೂಣಿಯಲ್ಲಿದೆ. ಆದ್ದರಿಂದ, ನಾವು ಕೂಡ ಅದೇರೀತಿಯಾಗಿ ಕೆಲಸ ಮಾಡಬೇಕು. ತಿಂಗಳಿಗೊಮ್ಮೆ ಕಾನೂನು, ಸಮಾಜ ಕಲ್ಯಾಣ ಸೇರಿ ವಿವಿಧ ಚಟುವಟಿಕೆಗಳಿಗೆ ಒಂದು ಬಾರಿಯಾದರೂ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಇದರಿಂದಾಗಿ ನೌಕರರು ಹೆಚ್ಚು ಕಾರ್ಯಶೀಲರಾಗುತ್ತಾರೆ ಎಂದರು. ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್, ರಾಜ್ಯ ಸರ್ಕಾರಿ ನೌಕರರ ಹಿರಿಯ ಉಪಾಧ್ಯಕ್ಷ ಶರಣಬಸಪ್ಪ ಸೇರಿ ತಾಲೂಕು ಮಟ್ಟದ ಅಧ್ಯಕ್ಷರು ಮತ್ತಿತರರು ಇದ್ದರು.
ಹತ್ತು ಜನಕ್ಕೆ ಸರ್ವೋತ್ತಮ ಪ್ರಶಸ್ತಿ
ಉತ್ತಮ ಸೇವೆ ಸಲ್ಲಿಸಿದ ಖಜಾನೆ ಇಲಾಖೆಯ ಉಪ ನಿರ್ದೇಶಕ ಜಿ.ಸುರೇಶ, ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾನಪ್ಪನವರ್, ಕಾರೇಕಲ್ಲು ಗ್ರಾಪಂ ಪಿಡಿಒ ಲೀಲಾವತಿ, ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಗ್ರಾಮ ಲೆಕ್ಖಾಧಿಕಾರಿ ಲಕ್ಷ್ಮಣ ನಾಯ್ಕ, ಸಿರಗುಪ್ಪದ ಭೂಮಾಪನಾ ಇಲಾಖೆಯ ಭೂ ಮಾಪಕ ಜೆ.ಯಂಜಾರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಸಾಯಿಪ್ರಭ, ಸಮಾಜ ಕಲ್ಯಾಣ ಇಲಾಖೆಯ ಎಫ್‌ಡಿಎ ನಟರಾಜ, ಪೊಲೀಸ್ ಕಚೇರಿಯ ಪ್ರಥಮ ಎಫ್‌ಡಿಎ ಸುನಂದಾ, ಸಹಾಯಕ ಆಯುಕ್ತರ ಕಚೇರಿ ಎಫ್‌ಡಿಎ ಶಾಂತಕುಮಾರ್, ತೋರಣಗಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ಡಿ ನೌಕರ ಶಿವರಾಜಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.