ಬಳ್ಳಾರಿ : ಸಂವಿಧಾನದ ಆಶಯಗಳನ್ನು ಪಾಲಿಸಲು ಎಲ್ಲ ವರ್ಗಕ್ಕೂ ಅವಕಾಶ ಕಲ್ಪಿಸಿದ ಮಹಾನ್ ಚೇತನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಎಂದು ವಿಜಯಪುರದ ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ ಹೇಳಿದರು.
ಇಲ್ಲಿಯ ವಿಎಸ್‌ಕೆ ವಿವಿಯಲ್ಲಿ ಶುಕ್ರವಾರ ಹಮ್ಮಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿರ್ಲಕ್ಷ್ಯ ಹಾಗೂ ತಾತ್ಸಾರಕ್ಕೆ ಒಳಗಾಗಿದ್ದ ಮಹಿಳೆಯರ ಪರವಾಗಿ ಧ್ವನಿ ಎತ್ತಿದವರು ಅಂಬೇಡ್ಕರ್ . ಶೋಷಿತ ವರ್ಗದ ಏಳಿಗೆಗಾಗಿ ಜೀವನ ಮುಡಿಪಾಗಿಟ್ಟ ಬಾಬಾ ಸಾಹೇಬರು, ಸಂವಿಧಾನದ ಪ್ರತಿ ಪುಟದಲ್ಲೂ ಇಂದಿಗೂ ಜೀವಿಸುತ್ತಿದ್ದಾರೆ ಎಂದರು.
ಇತಿಹಾಸ ಎಂಬುದು ತಾಯಿಗರ್ಭದಷ್ಟೆ ಪವಿತ್ರವಾದದ್ದು, ಹಾಗಾಗಿ ಪ್ರತಿ ಸಂಗತಿಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವುದು ಯೋಗ್ಯ.ಮೌಢ್ಯ ಆಚರಣೆ, ಧರ್ಮದ ಅಮಲು ಬದಿಗೊತ್ತಿ ಸಂವಿಧಾನದ ಚೌಕಟ್ಟಿನಲ್ಲಿ ಜಾತ್ಯತೀತ ರಾಷ್ಟದಲ್ಲಿ ನಾವೆಲ್ಲ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಶೋಷಣೆ ರಹಿತ ಸಮಾಜ, ಗೌರವಯುತ ಸಹಬಾಳ್ವೆ, ಸಮಾನತೆ, ಏಕತೆ ಪರಿಕಲ್ಪನೆಗೆ ನಾಂದಿ ಹಾಡಿದ ಅಂಬೇಡ್ಕರ್ ಅವರು ಎಂದೆಂದಿಗೂ ಅಮರ ಎಂದು ಹೇಳಿದರು.
ವಿವಿಯ ಸಿಂಡಿಕೇಟ್ ಸದಸ್ಯೆ ಜಯಲಕ್ಷ್ಮೀ ನಾಯಕ್ ಮಾತನಾಡಿ, ಕೇವಲ ನಿಯಮಗಳನ್ನು ರೂಪಿಸುವುದು, ನಿಯಮಗಳನ್ನು ಪಾಲಿಸುವುದು ವಿಶ್ವವಿದ್ಯಾಲಯದ ಕೆಲಸವಾಗದೇ ಮಾನವೀಯ ಮೌಲ್ಯಗಳನ್ನು ರೂಪಿಸುವ ಕೇಂದ್ರವಾಗಬೇಕು ಎಂಬುದು ಬಾಬಾಸಾಹೇಬರ ಕನಸಾಗಿತ್ತು. ಇದನ್ನು ನಾವೆಲ್ಲರೂ ಪಾಲಿಸಿ ಸಮಾಜಕ್ಕೆ ತಮ್ಮ ಹಕ್ಕುಗಳ ಬದ್ಧತೆ ಪ್ರದರ್ಶಿಸಲು ನೆರವಾಗಬೇಕು ಎಂದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಘೋಷಿಸಿದರು. ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ, ಅವರೊಬ್ಬ ವಿಶ್ವ ನಾಯಕ ಎಂದು ಬಣ್ಣಿಸಿದರು.