

ಬಳ್ಳಾರಿ : ಕಳೆದ ಮೂರು ವರ್ಷಗಳಿಂದ ಸುರಿದ ಭಾರಿ ಮಳೆಗೆ ಬೆಳೆಗಳು ಹಾಳಾಗಿದ್ದು, ಈ ಕಾರಣಕ್ಕೆ ಕೃಷಿ ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ಇದೇ ಬೇಡಿಕೆಗೆ ಆಗ್ರಹಿಸಿ ಬ್ಯಾಂಕಿನ ಎದುರು ಜೂ.27ರಿಂದ ಜು.24ರವರೆಗೆ ಧರಣಿ ನಡೆಸಿದ್ದೇವೆ. ಬಳಿಕ ಬ್ಯಾಂಕ್ ಅಧಿಕಾರಿಗಳು ಸೆ.5ರಂದು ಪತ್ರ ನೀಡಿ, ಕೃಷಿ ಸಾಲ ತಿರುವಳಿ ನೀತಿ ರೂಪಿಸಿದ್ದು, ರೈತರು ತಮ್ಮ ಸಾಲ ತಿರುವಳಿ ಮಾಡಿ ಹೊಸ ಬೆಳೆ ಸಾಲ ಪಡೆಯಬಹುದು ಎಂದು ತಿಳಿಸಿದ್ದಾರೆ. ಆದರೆ, ಈ ಪತ್ರ ಸ್ಪಷ್ಟವಾಗಿಲ್ಲ ಎಂದು ಆರೋಪಿಸಿದರು.
ಒಟ್ಟಾರೆ ಸಾಲದ ಶೇ.30 ಹಣವನ್ನು ರೈತರಿಂದ ಕಟ್ಟಿಸಿಕೊಂಡು ಒಂದಾವರ್ತಿ ಇತ್ಯರ್ಥಪಡಿಸಬೇಕು. ಕೃಷಿ ಸಾಲಕ್ಕೆ ಬಡ್ಡಿ ಮೇಲೆ ಬಡ್ಡಿ ಹಾಕಿ ಅಸಲಿಗಿಂತ ಬಡ್ಡಿ ಹೆಚ್ಚು ವಸೂಲು ಮಾಡುವ ಕ್ರಮ ನಿಲ್ಲಿಸಬೇಕು. ಸಾಲದ ಹಣಕ್ಕೆ ಕೃಷಿ ಉತ್ಪನ್ನವನ್ನೇ ನೇರವಾಗಿ ಜಮಾ ಮಾಡಲು ಅವಕಾಶ ನೀಡಬೇಕು. ಬೆಳೆ ಹಾಳಾದಾಗ ರೈತರ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ಎಲ್ಲರಿಗೂ ಅನ್ವಯವಾಗಬೇಕು. ಆರ್‌ಬಿಐ ನಿಬಂಧನೆ ಪ್ರಕಾರ ರೈತರಿಗೆ ನೀಡುವ ಸಾಲವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಡಬಾರದು. ರಾಷ್ಟ್ರೀಕೃತ, ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕ್‌ಗಳಿಗೆ ಏಕರೂಪದ ಸಾಲ ಮನ್ನಾ ಯೋಜನೆ ಇರಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ತಿಮ್ಮನಗೌಡ ಬೈರಾಪುರ, ಕಲ್ಲುಕಂಬ ಪಂಪಾಪತಿ, ಲೇಪಾಕ್ಷಿ ಅಸುಂಡಿ, ಬಸವರಾಜಸ್ವಾಮಿ ಮತ್ತಿತರರು ಇದ್ದರು.