

ಬಳ್ಳಾರಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಕೈಬಿಡುವಂತೆ ಆಗ್ರಹಿಸಿ ಎಐಡಿಎಸ್‌ಒ ಮತ್ತು ಎಐಡಿವೈಒ ಸಂಘಟನೆಗಳ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿ, 2014ರಿಂದ ಪ್ರತಿವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಮಾತನಾಡುತ್ತಿದ್ದ ಸರ್ಕಾರ, ಈಗ 1.5 ವರ್ಷದಲ್ಲಿ ಕೇವಲ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳುತ್ತಿದೆ. ಆದರೆ, ಈ ಸಂಖ್ಯೆಯು ಪ್ರಸಕ್ತ ದೇಶದಲ್ಲಿರುವ ಉದ್ಯೋಗಗಳ ಅವಶ್ಯಕತೆಗೆ ಹೋಲಿಸಿದರೆ ಅತ್ಯಂತ ಕಡಿಮೆಯದಾಗಿದೆ. ಇನ್ನೊಂದೆಡೆ, ಅಗ್ನಿಪಥ ಯೋಜನೆಯೂ ಉದ್ಯೋಗ ಭದ್ರತೆಯ ಬುನಾದಿಗೇ ಪೆಟ್ಟು ನೀಡುತ್ತದಲ್ಲದೆ, ನಿರುದ್ಯೋಗ ಸಮಸ್ಯೆ ಪರಿಹರಿಸಲು ಸರ್ಕಾರ ಶ್ರಮ ವಹಿಸುತ್ತಿದೆ ಎಂದು ಬಿಂಬಿಸಿ, ಯುವಜನರನ್ನು ವಂಚಿಸುವ ತಂತ್ರವಾಗಿದೆ. ಪೂರ್ಣ ಪ್ರಮಾಣದಲ್ಲಿ ಯುವಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಅಗ್ನಿಪಥ ಯೋಜನೆ ವಿರುದ್ಧ ಬೆಳಗಾವಿಯಲ್ಲಿ ಶಾಂತಿಯುತ ಹೋರಾಟ ಮಾಡುತ್ತಿದ್ದ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮತ್ತು ರಾಜ್ಯ ಸಮಿತಿ ಸದಸ್ಯ ರಾಜು ಗಾಣಿಗಿಯನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿದರು.
ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ, ಜಗದೀಶ್ ನೇಮಕಲ್, ಮುಖಂಡರಾದ ಉಮೇಶ್, ಮೇಘನಾಥ್, ಪವನ್, ವಿಶ್ವನಾಥ್, ಮಹಮ್ಮದ್ ಫಯಾಜ್, ಜೆ.ಸೌಮ್ಯಾ, ಕೆ.ಈರಣ್ಣ, ಎಂ.ಶಾಂತಿ, ಅನುಪಮಾ, ನಿಹಾರಿಕ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.