ಆದರ್ಶ ಮೌಲ್ಯ ಗುಣ ಅಳವಡಿಸಿಕೊಳ್ಳಿ

Published on

ಬಳ್ಳಾರಿ ; ನೇಕಾರ ಸಂತರಾದ ದೇವರ ದಾಸಿಮಯ್ಯ ಅವರ ಆಧ್ಯಾತ್ಮಿಕ ಮಾನವೀಯ ಗುಣ ಮತ್ತು ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಹೇಳಿದರು.

ನಗರದ ಹೊಂಗಿರಣದ ಸಾಂಸ್ಕ್ರತಿಕ ಸಮುಚ್ಚಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸಂತ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಚರಿತ್ರೆಯಲ್ಲಿ ಹಲವಾರು ಸಾಹಿತ್ಯ ಶರಣರು ಆಧ್ಯಾತ್ಮಿಕತೆಯ ಚಿಂತನೆಯನ್ನು ವ್ಯಾಪಕಗೊಳಿಸಿದ್ದು, ಕಲ್ಯಾಣದಲ್ಲಿ ಬಸವಣ್ಣ ನವರ ಕಾಲಘಟ್ಟದಲ್ಲಿ ಸಮಾಜದ ಏಳಿಗೆ, ಸಮಾನತೆ, ಕಾಯಕ ದಾಸೋಹ, ಮಾನವೀಯ ಗುಣಗಳನ್ನು ಮತ್ತು ಮೌಲ್ಯಗಳನ್ನು ರೂಪಿಸಿದ ಕೀರ್ತಿ ಕಾಲವಾಗಿತ್ತು ಎಂದು ತಿಳಿಸಿದರು.

ಅಂದಿನ ಕಾಲದ ಸಮಾಜದಲ್ಲಿ ಜಾತಿ-ವರ್ಗ ಸಂಘರ್ಷಗಳಿಂದ ದೂರವಿರುವಂತೆ ಮಾನವಕುಲಕ್ಕೆ ಅರಿವು ಮೂಡಿಸುತ್ತಿದ್ದರು. ದೇವರ ದಾಸಿಮಯ್ಯ ಅವರು ಆದ್ಯ ವಚನಕಾರರಾಗಿದ್ದು, ಸಮಾಜದಲ್ಲಿ ಮನೆ ಮಾಡಿದ್ದ ಮೂಢ ನಂಬಿಕೆಗಳನ್ನು ನೇರ ನಿಷ್ಠುರ ನುಡಿಗಳಿಂದ ಟೀಕಿಸಿದ್ದರು ಎಂದರು.

ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಿ.ದೇವಾನಂದ ಮಾತನಾಡಿ, ಸಮಾಜದ ಬಡವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಸಮುದಾಯದ ಯುವಕರು-ಯುವತಿಯರು, ಸದೃಡವಾಗಿ ಬೆಳೆದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net