ಸಾಲ ನೆಪದಲ್ಲಿ ಕಿರುಕುಳ ನೀಡಿದಲ್ಲಿ ಕ್ರಮ

Published on

ಬಳ್ಳಾರಿ ; ಸಾಲ ವಸೂಲಾತಿ ನೆಪದಲ್ಲಿ ಮಾನಸಿಕ ನಿಂದನೆ, ಅವಾಚ್ಯ ಶಬ್ದ ಬಳಕೆ ಹಾಗೂ ಅವಮಾನಿಸುವ ಪ್ರಕರಣಗಳು ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಖಡಕ್ ಸೂಚಿಸಿದರು.

ಇಲ್ಲಿನ ಡಿಸಿ ಕಚೇರಿಯ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಅದ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಆಗುತ್ತಿರುವ ಕಿರುಕುಳ ಹಿನ್ನೆಲೆ ಹಾಗೂ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿನ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು. ಸಾಲ ವಸೂಲಾತಿ ನೆಪದಲ್ಲಿ ಯಾವುದೇ ಕಿರುಕುಳ ಪ್ರಕರಣಗಳು ವರದಿಯಾಗಿಲ್ಲ. ಕಂಪನಿಗಳ ಪದಾಧಿಕಾರಿಗಳು ಸಾರ್ವಜನಿಕ ವಲಯದಲ್ಲಿ ಉತ್ತಮ ಭಾಂದವ್ಯ ಇಟ್ಟುಕೊಳ್ಳಬೇಕು. ಕಿರುಕುಳ ಪ್ರಕರಣಗಳಿಗೆ ಆಸ್ಪದ ನೀಡಬಾರದು ಎಂದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಅದ ಆಗುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕುರಿತಾಗಿ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಸುಗ್ರಿವಾಜ್ಞೆ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಯ್ದೆಯು ಜಾರಿಗೆ ಬರಲಿದೆ. ಸಾಲ ಮಂಜೂರಾತಿ ನಿಯಮಗಳು, ಸಾಲದ ಮೊತ್ತ, ಅವಧಿ, ಬಡ್ಡಿ ದರ, ಹಿಂಪಾವತಿ ಅವಧಿ ಸೇರಿದಂತೆ ಅಗತ್ಯ ಮಾಹಿತಿಗಳನ್ನೊಳಗೊಂಡ ಮಾರ್ಗಸೂಚಿ ಸಾಲ ಪಡೆಯುವವರಿಗೆ ಕಡ್ಡಾಯವಾಗಿ ನೀಡಬೇಕು. ಪಡೆದ ಸಾಲ ವಸೂಲಾತಿ ನೆಪದಲ್ಲಿ ಯಾವುದೇ ಕಾರಣಕ್ಕೂ ಕಿರುಕುಳ ನೀಡುವಂತಿಲ್ಲ ಎಂದು ತಾಕೀತು ಮಾಡಿದರು.

ಎಸ್ಪಿ ಡಾ. ವಿ.ಜೆ.ಶೋಭಾರಾಣಿ ಮಾತಾನಾಡಿ, ಜಿಲ್ಲೆಯಲ್ಲಿ ಒಟ್ಟು 118 ಮೈಕ್ರೋ ಫೈನಾನ್ಸ್ ಕಂಪನಿಗಳಿದ್ದು, ಅದರಲ್ಲಿ 27 ಕಂಪನಿಗಳು ಆರ್‌ಬಿಐಯಡಿ ಅಧೀಕೃತವಾಗಿ ನೋಂದಾಯಿಸಿಕೊಂಡಿವೆ. ಇನ್ನುಳಿದ 97 ಕಂಪನಿಗಳು ನೋಂದಾಯಿಸಿಕೊಂಡಿಲ್ಲ ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ಮಾಹಿತಿಯನ್ನು ಡಿಸಿ ಅಥವಾ ಎಸ್ಪಿ ಕಚೇರಿಗೆ ನೀಡಬೇಕು. ಮುಖ್ಯವಾಗಿ ಸಾಲ ವಸೂಲಾತಿಗೆ ಬೆಳಗ್ಗೆ 09 ಗಂಟೆಯ ಮುಂಚೆ ಮತ್ತು ಸಂಜೆ 06 ಗಂಟೆಯ ನಂತರ ಕರೆ ಮಾಡುವುದಾಗಲೀ, ಮನೆಯ ಬಳಿ ಹೋಗುವುದಾಗಲೀ ಮಾಡುವಂತಿಲ್ಲ. ಅನಗತ್ಯವಾಗಿ ಮಾನಹಾನಿ, ಕಿರುಕುಳ ನೀಡುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಕೇಸ್ ದಾಖಲು ಮಾಡಿಕೊಳ್ಳಲಾಗುವುದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳಿಂದ ಹಣ ವಸೂಲಾತಿ ನೆಪದಲ್ಲಿ ಮಾನಹಾನಿ ಇಲ್ಲವೇ ಕಿರುಕುಳ ನೀಡುವುದು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9480803000 ಗೆ ಕರೆ ಮಾಡಿ ತಿಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net